ಕನ್ನಡ ಚಿತ್ರರಂಗದಲ್ಲಿ ಕಾದಂಬರಿ ಆಧಾರಿತ ಸಿನೆಮಾ ಕ್ಷೀಣ: ಹಿರಿಯ ಸಾಹಿತಿ ಡಾ.ಬಿ.ಎಲ್.ವೇಣು

Update: 2018-06-10 12:52 GMT

ಬೆಂಗಳೂರು, ಜೂ.10: ಕನ್ನಡ ಚಿತ್ರರಂಗದಲ್ಲಿ ಕಾದಂಬರಿ ಆಧಾರಿತ ಸಿನೆಮಾಗಳು ಕ್ಷೀಣಿಸುತ್ತಿದೆ. ಇದಕ್ಕೆ, ಪರಭಾಷೆಯ ರೀಮೆಕ್ ಸಿನೆಮಾಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದೇ ಕಾರಣ ಎಂದು ಹಿರಿಯ ಸಾಹಿತಿ ಡಾ.ಬಿ.ಎಲ್.ವೇಣು ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಾಡೋಜ ಡಾ.ಬರಗೂರು ಪ್ರತಿಷ್ಠಾನ ಆಯೋಜಿಸಿದ್ದ, ಸಮಾರಂಭದಲ್ಲಿ ‘ಪ್ರೊ.ಬರಗೂರು ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ಕಾದಂಬರಿ ಆಧಾರಿತ ಮತ್ತು ಸಾಹಿತ್ಯದ ಸಂಭಾಷಣೆಗೂ ಹೆಚ್ಚಿನ ಒತ್ತು ನೀಡಲಾಗುತಿತ್ತು. ಆದರೆ, ಇಂದು ಇದೆಲ್ಲಾ ಮಾಯವಾಗಿದ್ದು, ರೀಮೆಕ್ ಸಿನೆಮಾ ಮಾಡಲು ಹಿಂದೆ ಬಿದಿದ್ದಾರೆ. ಸಿನೆಮಾ ಎಂಬುವುದು ಎಲ್ಲರನ್ನು ಆಕರ್ಷಿಸುತ್ತದೆ. ಆದರೆ,ಕೆಲವರು ಮಾತ್ರ ಯಶಸ್ವಿಯಾಗುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

80ರ ದಶಕದಲ್ಲಿ ಸಿನಿಮಾ ಕ್ಷೇತ್ರ ಪ್ರವೇಶಿಸಿದ ನನ್ನನ್ನು ಉಡಾಫೆ ಮಾಡುತ್ತಿದ್ದವರೇ ಇಂದೂ ಬೆಂಗಳೂರಿನ ಗಾಂಧಿನಗರದಲ್ಲಿ ಅವಕಾಶಕ್ಕಾಗಿ ಸಾಲು ಸಾಲು ನಿಂತಿದ್ದಾರೆ ಎಂದ ಅವರು, ಸಿನಿಮಾ ಕ್ಷೇತ್ರದಲ್ಲಿ ನನಗೆ ಯಾರು ಗಾಡ್‌ಫಾದರ್ ಇಲ್ಲ, ಅದು ಬಯಸದೇ ಬಂದ ಭಾಗ್ಯ ಎಂದು ವೇಣು ನುಡಿದರು.

ಚಲನಚಿತ್ರ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಮಾತನಾಡಿ, ನನ್ನ ವೃತ್ತಿ ಜೀವನದಲ್ಲಿ 179 ಕ್ಕೂ ಹೆಚ್ಚು ಕನ್ನಡ ಕಾದಂಬರಿಗಳನ್ನು ಸಿನಿಮಾಗಳಿಗಾಗಿಯೇ ಆರಿಸಿಕೊಳ್ಳಲಾಗಿದೆ. ಆಂಗ್ಲ ಭಾಷೆ ಸಿನೆಮಾ ಬಿಟ್ಟರೆ, ಬೇರೆ ಯಾವುದೇ ಭಾಷೆಯಲ್ಲಿ ಇಷ್ಟು ಪ್ರಮಾಣದ ಕಾದಂಬರಿಗಳು ಚಿತ್ರಗಳಾಗಿಲ್ಲ ಎಂದರು.

ವರನಟ ರಾಜ್‌ಕುಮಾರ್ ಅವರ ಪತ್ನಿ ಪಾರ್ವತಮ್ಮ ಅವರು, ಬಯಲು ದಾರಿ, ಹೊಸ ಬೆಳಕು, ಸಮಯದ ಗೊಂಬೆ ಸೇರಿದಂತೆ ಇನ್ನಿತರೆ ಕಾದಂಬರಿ ಆಧಾರಿತ ಚಿತ್ರಗಳನ್ನು ಮಾಡಲು ಪ್ರೇರಣೆ ನೀಡಿದ್ದರು ಎಂದ ಅವರು, ಡಾ.ರಾಜ್‌ಕುಮಾರ್ ಅವರು ವಿದ್ಯಾವಂತರಾದ ಬರಗೂರು ರಾಮಚಂದ್ರಪ್ಪ ಅವರನ್ನು ಕಂಡರೆ ಅಪಾರ ಗೌರವ, ಮನೆಗೆ ಬಂದರೆ ಅವರನ್ನು ತಬ್ಬಿಕೊಂಡು ಮಾತನಾಡಿಸುತ್ತಿದ್ದರು ಎಂದು ನೆನಪು ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ವಿಚಾರವಾದಿ ಡಾ.ಜಿ.ರಾಮಕೃಷ್ಣ, ಸಾಹಿತಿ ರೇಖಾ ಕಾಖಂಡಕಿ ಅವರಿಗೆ ರಾಜಲಕ್ಷ್ಮೀ ಬರಗೂರು ಪುಸ್ತಕ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು. ಹಿರಿಯ ನಟಿ ಡಾ.ಬಿ.ಸರೋಜಾದೇವಿ, ಸಂಗೀತ ನಿರ್ದೇಶಕ ಡಾ.ಹಂಸಲೇಖ, ಹಿರಿಯ ಸಾಹಿತಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News