ಜಂಟಿ ಕಾರ್ಯದರ್ಶಿ ಹುದ್ದೆಗೆ ನೇರ ನೇಮಕ: ಕೇಂದ್ರ ಸರಕಾರದ ಘೋಷಣೆ

Update: 2018-06-10 15:46 GMT

ಹೊಸದಿಲ್ಲಿ, ಜೂ.10: ಆರ್ಥಿಕ ವ್ಯವಹಾರ, ನಾಗರಿಕ ವಾಯುಯಾನ ಅಥವಾ ವಾಣಿಜ್ಯ ಮುಂತಾದ 10 ಕ್ಷೇತ್ರಗಳಲ್ಲಿ 15 ವರ್ಷದ ಕಾರ್ಯಾನುಭವ ಹೊಂದಿರುವ ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ನೇರವಾಗಿ ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ ಹುದ್ದೆಗೆ ನೇಮಕಗೊಳ್ಳುವ ಅವಕಾಶವೊಂದನ್ನು ನರೇಂದ್ರ ಮೋದಿ ಸರಕಾರ ಒದಗಿಸಿದೆ.

ಆಯ್ಕೆಯಾದ ಅಭ್ಯರ್ಥಿಗಳನ್ನು ಮೂರು ವರ್ಷಗಳ (ಸಾಧನೆಯ ಆದಾರದಲ್ಲಿ ಐದು ವರ್ಷಕ್ಕೆ ವಿಸ್ತರಿಸಬಹುದಾದ) ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.ಇವರಿಗೆ ಜಂಟಿ ಕಾರ್ಯದರ್ಶಿಗಳ ವೇತನ ಪ್ರಮಾಣ ನೀಡಲಾಗುವುದು (ತಿಂಗಳಿಗೆ. 1.44 ಲಕ್ಷ ರೂ.ನಿಂದ 2.18 ಲಕ್ಷ ರೂ.ವರೆಗೆ). ಜೊತೆಗೆ ನಿಯಮಾನುಸಾರ ಸರಕಾರಿ ನಿವಾಸದ ವ್ಯವಸ್ಥೆ ಹಾಗೂ ವಾಹನ ವ್ಯವಸ್ಥೆ ಒದಗಿಸಲಾಗುವುದು. ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹಾಗೂ ಕಾರ್ಯನೀತಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಕೊಡುಗೆ ನೀಡಬಯಸುವ ಪ್ರತಿಭಾವಂತ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು.

ಕಂದಾಯ, ಆರ್ಥಿಕ ವ್ಯವಹಾರ, ವಿತ್ತ ಸೇವೆ, ವಾಣಿಜ್ಯ ಸೇರಿದಂತೆ 10 ಇಲಾಖೆಗಳಲ್ಲಿ ಜಂಟಿ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಿಬ್ಬಂದಿ ತರಬೇತಿ ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳ ಕೊರತೆಯಿರುವ ಕಾರಣ ಕಳೆದ ವರ್ಷ ಕಾರ್ಯದರ್ಶಿಗಳ ಸಮಿತಿ(ಸಿಒಎಸ್) ಈ ಹುದ್ದೆಗಳಿಗೆ ನೇರ ನೇಮಕದ ಶಿಫಾರಸು ಮಾಡಿದೆ.ಆಡಳಿತದಲ್ಲಿ ಹೊಸ ಪರಿಕಲ್ಪನೆ ತರಲು ಹಾಗೂ ಮಾನವಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಪ್ರಸ್ತಾವನೆ ಮಾಡಲಾಗಿದೆ ಎಂದು ಸರಕಾರ ತಿಳಿಸಿದೆ.

ಕಂದಾಯ, ಆರ್ಥಿಕ ವ್ಯವಹಾರ, ವಿತ್ತ ಸೇವೆ, ಕೃಷಿ, ಸಹಕಾರ ಮತ್ತು ರೈತರ ಹಿತಚಿಂತನೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಶಿಪ್ಪಿಂಗ್, ಪರಿಸರ, ಅರಣ್ಯ ಮತ್ತು ಹವಾಗುಣ ಬದಲಾವಣೆ, ನೂತನ ಮತ್ತು ನವೀಕರಿಸಬಹುದಾದ ಇಂಧನಶಕ್ತಿ, ನಾಗರಿಕ ವಾಯುಯಾನ ಮತ್ತು ವಾಣಿಜ್ಯ- ಈ ಕ್ಷೇತ್ರದಲ್ಲಿ ಪ್ರತಿಭಾವಂತ ನಾಗರಿಕರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಲ್ಲದೆ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ಕೂಡಾ ಅರ್ಜಿ ಸಲ್ಲಿಸಬಹುದಾಗಿದೆ. ಸ್ವತಂತ್ರ ಭಾರತಕ್ಕೆ ಬ್ರಿಟಿಷರಿಂದ ಕೊಡುಗೆಯಾಗಿ ಬಂದಿರುವ ಅತ್ಯುತ್ತಮ ಪರಂಪರೆಗಳಲ್ಲಿ ಒಂದಾಗಿರುವ ನಾಗರಿಕ ಸೇವಾ ವ್ಯವಸ್ಥೆ ಆಡಳಿತ ಕಾರ್ಯಕ್ಕೆ ಸಲಹೆ ನೀಡುವುದರ ಜೊತೆಗೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೂ ಅತ್ಯಂತ ಮಹತ್ವದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News