ಉಚಿತ ಬಸ್‌ಪಾಸ್ ವಿತರಣೆಗೆ ಆಗ್ರಹಿಸಿ ಧರಣಿ

Update: 2018-06-11 14:24 GMT

ಬೆಂಗಳೂರು, ಜೂ.11: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವಂತೆ ಒತ್ತಾಯಿಸಿ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಮತ್ತು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಶೈಕ್ಷಣಿಕ ವರ್ಷ ಆರಂಭದಲ್ಲಿಯೇ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ತೆರಳಲು ಅನುಕೂಲವಾಗುವಂತೆ ಬಸ್‌ಪಾಸ್ ವಿತರಣೆ ಮಾಡಲು ನೂತನ ಸರಕಾರ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಿಲ್ಲಾ ಕಾರ್ಯದರ್ಶಿ ಅಜಯ್ ಕಾಮತ್, ಹಿಂದಿನ ಸರಕಾರದ ಆಡಳಿತ ಅವಧಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಕಳೆದ 4 ವರ್ಷಗಳಿಂದ ಸತತ ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ನೋಟು ನಿಷೇಧದಂತಹ ಸಮಸ್ಯೆಗಳಿಂದ ಕಂಗೆಟ್ಟ ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ನಿರ್ಧಾರ ಸಂತಸ ತಂದಿತ್ತು ಎಂದು ಹೇಳಿದರು.

ಆದರೆ, ಬಜೆಟ್ ಅಧಿವೇಶನದಲ್ಲಿ ಸದನದ ಒಪ್ಪಿಗೆ ಪಡೆದ ಉಚಿತ ಬಸ್‌ಪಾಸ್ ನೀಡುವ ನಿರ್ಧಾರ ಸೂಕ್ತ ಸರಕಾರಿ ಆದೇಶವಾಗದೇ ಉಳಿದುಕೊಂಡ ಕಾರಣ ಸಾರಿಗೆ ಇಲಾಖೆಯ ಅಧಿಕಾರಿಗಳು ಇದನ್ನು ಜಾರಿಗೊಳಿಸುವಲ್ಲಿ ಗೊಂದಲ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಈಗಾಗಲೆ ತರಗತಿಗಳು ಪ್ರಾರಂಭವಾಗಿದೆ. ಹೊಸ ಬಸ್‌ಪಾಸ್ ಸಿಗದೇ ನೂರಾರು ರೂಪಾಯಿ ವ್ಯಯ ಮಾಡಿ ತರಗತಿಗೆ ಹಾಜರಾಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಲಕ್ಷಾಂತರ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹಿಂದಿನ ಸರಕಾರದ ಬಜೆಟ್‌ನಲ್ಲಿ ಅನುಮೋದನೆ ಪಡೆದುಕೊಂಡ ಉಚಿತ ಬಸ್‌ಪಾಸ್ ನೀಡುವ ನಿರ್ಧಾರವನ್ನು ಇಂದಿನ ನೂತನ ಸರಕಾರ ತುರ್ತಾಗಿ ಜಾರಿ ಮಾಡಬೇಕು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲವಾಗುವಂತಹ ಕ್ರಮಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಯುವ ಮುಖಂಡ ಜಯಣ್ಣ, ಶಾಂತ, ಅಜಯ್ ಕಾಮತ್, ಕೃಷ್ಣ, ವಿದ್ಯಾರ್ಥಿ ಮುಖಂಡ ರವಿನಂದನ್ ಸೇರಿದಂತೆ ನಗರದ ವಿವಿಧ ಕಾಲೇಜುಗಳಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News