ದೀರ್ಘಾವಧಿ ವೀಸಾಗೆ ಯುಎಇ ತಯಾರಿ: ವಿದೇಶಕ್ಕೆ ರವಾನೆಯಾಗುವ ಹಣಕ್ಕೆ ಕತ್ತರಿ?

Update: 2018-06-11 17:27 GMT

ಶಾರ್ಜಾ, ಜೂ. 11: ಯುಎಇಯಲ್ಲಿ ಕಾನೂನುಗಳು ದಿನೇ ದಿನೇ ಬದಲಾಗುತ್ತಿವೆ. ವೈದ್ಯಕೀಯ, ಇಂಜಿನಿಯರಿಂಗ್, ಬಂಡವಾಳ ಹೂಡಿಕೆ ಮುಂತಾದ ಉನ್ನತ ಹುದ್ದೆಗಳ ಕನಿಷ್ಠ 2 ಹಾಗೂ ಗರಿಷ್ಠ ಮೂರು ವರ್ಷಗಳಿಗೆ ಸೀಮಿತವಾಗಿದ್ದ ವೀಸಾ ಅವಧಿಯನ್ನು 10 ವರ್ಷಗಳಿಗೆ ಹೆಚ್ಚಿಸಲು ಅಲ್ಲಿನ ಸರಕಾರ ತೀರ್ಮಾನಿಸಿದೆ. ಇದರಿಂದಾಗಿ ತಾಯ್ನಾಡಿಗೆ ಅನಿವಾಸಿಗಳು ಕಳುಹಿಸಿಕೊಡುತ್ತಿದ್ದ ಹಣಕ್ಕೆ ಕತ್ತರಿ ಬೀಳುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಿಸುತ್ತಿದ್ದಾರೆ.

ಯುಎಇಯಲ್ಲಿ ಇದೀಗ 78 ಲಕ್ಷ ವಿದೇಶಿಯರು ಉದ್ಯೋಗದಲ್ಲಿದ್ದಾರೆ. ಇಲ್ಲಿನ ಜನಸಂಖ್ಯೆಯ ಸುಮಾರು 85 ಶೇಕಡ ವಿದೇಶೀಯರಾಗಿದ್ದಾರೆ. ವಿಶ್ವದಲ್ಲಿಯೇ ಅತಿ ಹೆಚ್ಚು ವಿದೇಶೀಯರಿಗೆ ಉದ್ಯೋಗ ಕಲ್ಪಿಸಿಕೊಟ್ಟ ರಾಷ್ಟ್ರ ಎಂಬ ಮನ್ನಣೆಗೂ ಯುಎಇ ಪಾತ್ರವಾಗಿದೆ.

ಕಳೆದ ಬಾರಿ ಸುಮಾರು 42 ಬಿಲಿಯ ದಿರ್ಹಮ್ (ಸುಮಾರು 77,130 ಕೋಟಿ ರೂಪಾಯಿ) ಹಣವನ್ನು ಇಲ್ಲಿನ ಉದ್ಯೋಗಿಗಳು ತಮ್ಮ ದೇಶಗಳಿಗೆ ರವಾನಿಸಿದ್ದಾರೆ ಎಂಬುದನ್ನು ಅಂಕಿ ಅಂಶಗಳು ಸ್ಪಷ್ಟಪಡಿಸುತ್ತಿವೆ. ಭಾರತಕ್ಕೆ ಇದರಲ್ಲಿ ಸಿಂಹಪಾಲು ಅಂದರೆ 14.8 ಬಿಲಿಯ ದಿರ್ಹಮ್ (ಸುಮಾರು 27,000 ಕೋಟಿ ರೂಪಾಯಿ) ಹಣ ಹರಿದು ಬಂದಿದೆ.

ದೀರ್ಘಾವಧಿ ಹೂಡಿಕೆ?

ನೂತನ ದೀರ್ಘಾವಧಿ ವೀಸಾ ನಿಯಮದಿಂದಾಗಿ ವಲಸಿಗರು ತಾಯ್ನಾಡಿಗೆ ಕಳುಹಿಸಿಕೊಡುವ ಹಣವನ್ನು ಇಲ್ಲಿನ ಸ್ಥಳೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಸಂಭವ ಅಧಿಕವಾಗಿರುವುದರಿಂದ ವಿದೇಶಗಳಿಗೆ ಹೋಗುವ ಹಣದ ಪ್ರಮಾಣದಲ್ಲಿ ಭಾರೀ ಪ್ರಮಾಣದ ಕಡಿತವನ್ನು ನಿರೀಕ್ಷಿಸಬಹುದಾಗಿದೆ. ತಾವು ಸಂಪಾದಿಸಿದ ವೇತನವನ್ನು ಉಳಿತಾಯ ಮಾಡಿ ಇಲ್ಲಿಯೇ ಹೂಡುವ ಅನೇಕ ಅವಕಾಶ ವಲಸಿಗರ ಮುಂದಿದೆ. ಸ್ಥಳೀಯ ಶೇರು ಮಾರುಕಟ್ಟೆ, ದುಬೈ ಆರ್ಥಿಕ ಮಾರುಕಟ್ಟೆ, ಅಬುಧಾಬಿ ಸೆಕ್ಯುರಿಟಿ ವಿನಿಮಯ ಇವುಗಳಲ್ಲಿ ಕೆಲವು. ವಿವಿಧ ಬಗೆಯ ವಿದೇಶಿ ಕಂಪೆನಿಗಳು ಇಲ್ಲಿ ಕಾರ್ಯಾಚರಿಸುತ್ತಿರುವುದರಿಂದ ಆ ಕಂಪೆನಿಗಳಲ್ಲಿಯೂ ಪಾಲುದಾರರಾಗಿ ತಮ್ಮ ಆರ್ಥಿಕ ಸ್ಥಿತಿಯನ್ನು ಗಟ್ಟಿಗೊಳಿಸಬಹುದಾಗಿದೆ.

ವಲಸಿಗರು ತಮ್ಮ ಸಂಪಾದನೆಯನ್ನೆಲ್ಲವನ್ನೂ ವಿದೇಶಕ್ಕೆ ಪ್ಯಾಕ್ ಮಾಡದೆ ಇಲ್ಲಿನ ಸ್ಥಳೀಯ ಮಾರುಕಟ್ಟೆಯಲ್ಲಿಯೂ ಹೂಡಿಕೆ ಮಾಡುವಂತೆ ಅವರನ್ನು ಮನವೊಲಿಸುವ ಪ್ರಯತ್ನವೂ ಈ ನಡೆಯ ಹಿಂದೆ ಇದೆ. ಇಲ್ಲಿನ ರಿಯಲ್ ಎಸ್ಟೇಟ್ ಹಾಗೂ ಶೇರು ಮಾರುಕಟ್ಟೆಗಳಲ್ಲಿ ಹಣ ಹೂಡಿ ಕ್ಷಿಪ್ರಗತಿಯಲ್ಲಿ ಲಾಭ ಕೊಯ್ಯುವ ಆಸೆಯನ್ನು ತೋರಿಸಿ ಅವರನ್ನು ಈ ರಾಷ್ಟ್ರದ ಆರ್ಥಿಕ ಬೆಳವಣಿಗೆಯಲ್ಲಿ ಸಕ್ರಿಯಗೊಳಿಸುವ ಉದ್ದೇಶ ಸರಕಾರದ್ದು.

ವಿದೇಶಿ ಒಡೆತನದ ಕಂಪೆನಿಗಳು ಸ್ಥಳೀಯ ಪಾಲುದಾರರಿಲ್ಲದೆ ತಮ್ಮದೇ ಕಚೇರಿಯನ್ನು ಸ್ಥಾಪಿಸುವ ಅವಕಾಶ ಸದ್ಯ ಇದ್ದು, ಹೊಸ ನಿಯಮಗಳು ಇದನ್ನು ಬಾಧಿಸುವುದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.

ಈ ವರ್ಷದ ಅಂತ್ಯದಲ್ಲಿ ಸರಕಾರವು ಸ್ಥಳೀಯ ಕಂಪೆನಿಗಳಲ್ಲಿ ಶೇ.100 ವಿದೇಶಿ ಒಡೆತನಕ್ಕೆ ಅವಕಾಶ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ. ಪ್ರಸಕ್ತ ಕಾನೂನಿನಲ್ಲಿ ವಿದೇಶಿ ಕಂಪೆನಿಗಳು ಯುಎಇ ಪ್ರಜೆಯೊಬ್ಬರನ್ನು ಪಾಲುದಾರರನ್ನಾಗಿ ನೇಮಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಅವರಿಗೆ ಕಂಪೆನಿಯ ಶೇ.51 ಪಾಲನ್ನು ಬಿಟ್ಟುಕೊಡಬೇಕಾಗಿದೆ. ವಕೀಲಿ, ವಾಸ್ತುಶಿಲ್ಪ ಹಾಗೂ ಎಂಜಿನಿಯರಿಂಗ್ ಎಂಬಿತ್ಯಾದಿ ವೃತಿತಿಪರ ಕ್ಷೇತ್ರಗಳಿಗೆ ಸ್ವದೇಶಿ ವ್ಯಕಿತಿ ಪಾಲುದಾರರಾಗಬೇಕಿಲ್ಲ.

ಯುಎಇ ಸರಕಾರದ ಹೊಸ ನಿರ್ಧಾರವು ಇಲ್ಲಿನ ಮಾರುಕಟ್ಟೆಯಲ್ಲಿ ವಿದೇಶಿ ಠೇವಣಾತಿಗೆ ಹೆಚ್ಚಿನ ಒತ್ತು ನೀಡಲಿದೆ. ವಿವಿಧ ಕ್ಷೇತ್ರಗಳಲ್ಲಿ ವಲಸಿಗರಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಇದು ಸಹಕರಿಸಲಿದೆ.

ಅದೀಬ್ ಅಹ್ಮದ್, ವ್ಯವಸ್ಥಾಪಕ ನಿರ್ದೇಶಕರು, ಲುಲು ಫೈನಾನ್ಶಿಯಲ್ ಗ್ರೂಪ್

Writer - ವರದಿ: ಸಿರಾಜ್ ಅರಿಯಡ್ಕ

contributor

Editor - ವರದಿ: ಸಿರಾಜ್ ಅರಿಯಡ್ಕ

contributor

Similar News