ಗ್ರಾಮೀಣ ರಸ್ತೆಗಳ ತುರ್ತು ದುರಸ್ಥಿಗೆ ಸೂಚನೆ: ಸಚಿವ ಕೃಷ್ಣಭೈರೇಗೌಡ
ಬೆಂಗಳೂರು, ಜೂ.12: ಮಳೆಯಿಂದ ಹಾಳಾಗಿರುವ ಗ್ರಾಮೀಣ ರಸ್ತೆಗಳ ತುರ್ತು ದುರಸ್ಥಿ ನಡೆಸಿ ಸಂಪರ್ಕ ಹಾಳಾಗದಂತೆ ಎಚ್ಚರ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಹೇಳಿದರು.
ಮಂಗಳವಾರ ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ದಿನಗಳಿಂದ ರಾಜ್ಯದ ಕೆಲವು ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿವೆ. ಇದಕ್ಕೆ ತಕ್ಷಣ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಿದೆ. 248 ಗ್ರಾಮಗಳಲ್ಲಿ ನೀರಿನ ಕೊರತೆ ಇದ್ದು, ಟ್ಯಾಂಕರ್ ಮೂಲಕ ನೀರು ಹಂಚುವ ಕೆಲಸ ನಡೆದಿದೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ನೀರಿನ ಸಮಸ್ಯೆ ಇದ್ದ ಕಡೆ, ಖಾಸಗಿ ಕೊಳವೆ ಬಾವಿಯನ್ನು ಬಾಡಿಗೆಗೆ ಪಡೆದು ನೀರು ಪೂರೈಸುವಂತೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಕೇಂದ್ರ ಸರಕಾರ ಕಳೆದ ಒಂದೂವರೆ ವರ್ಷದಲ್ಲಿ 1050 ಕೋಟಿ ರೂ.ಗಳನ್ನು ಬಾಕಿ ಇರಿಸಿಕೊಂಡಿದೆ. ಮಹಾತ್ಮಗಾಂಧಿ ನರೇಗಾ ಯೋಜನೆ ಸಂಪೂರ್ಣ ಕೇಂದ್ರ ಸರಕಾರದ ಪ್ರಾಯೋಜಕತ್ವದ ಯೋಜನೆ. ಆದರೂ ಕೇಂದ್ರ ಸರಕಾರ ಸಕಾಲದಲ್ಲಿ ಹಣ ನೀಡದ ಕಾರಣ ರಾಜ್ಯ ಸರಕಾರವೇ ಮುಂಗಡವಾಗಿ ಫಲಾನುಭವಿಗಳಿಗೆ ಹಣ ಪಾವತಿಸಿದೆ. ಹೀಗಾಗಿ ಕೇಂದ್ರ ಸರಕಾರದಿಂದ ಬರಬೇಕಾದ ಬಾಕಿ ಹಣವನ್ನು ಪಡೆಯಲು ಇಲಾಖೆಯ ಅಧಿಕಾರಿಗಳು ಕೇಂದ್ರ ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಈ ವರ್ಷ 8 ಕೋಟಿ 50 ಲಕ್ಷ ಮಾನವ ದಿನದ ಗುರಿ ಹೊಂದಲಾಗಿದೆ. ಕಳೆದ ವರ್ಷ 8ರಿಂದ 9ಕೋಟಿ ಮಾನವ ದಿನದ ಗುರಿ ಸಾಧಿಸಲಾಗಿತ್ತು. ರಾಜ್ಯದಲ್ಲಿ ಈಗ ಉತ್ತಮ ಮಳೆಯಾಗುತ್ತಿರುವುದರಿಂದ ಉದ್ಯೋಗ ಖಾತ್ರಿ ಯೋಜನೆಯ ಅವಲಂಬಿತರ ಸಂಖ್ಯೆ ಕಡಿಮೆಯಾಗಿದೆ. ಆದರೂ ಅರಣ್ಯೀಕರಣ, ನೀರು ಸಂಗ್ರಹ ಮತ್ತಿತರರ ಯೋಜನೆಗಳಿಗೆ ಒತ್ತು ನೀಡಿದ್ದೇವೆ. ಈಗಾಗಲೇ 80 ಲಕ್ಷ ಮಾನವ ದಿನಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾದೇವಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.