ಇಂಜಿನಿಯರ್ ಆತ್ಮಹತ್ಯೆ ಪ್ರಕರಣ: ಕಂಪೆನಿ ವಿರುದ್ಧ ಎಫ್‌ಐಆರ್ ದಾಖಲು
Update: 2018-06-12 18:25 IST
ಬೆಂಗಳೂರು, ಜೂ.12: ನಗರದ ಐಟಿಪಿಎಲ್‌ನ 12ನೇ ಮಹಡಿಯಲ್ಲಿರುವ ಸಾಫ್ಟ್‌ವೇರ್ ಕಂಪೆನಿಯ ಕಚೇರಿಯಿಂದ ಜಿಗಿದು ಉದ್ಯೋಗಿ ಭವೇಶ್ ಜೈಸ್ವಾಲ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಕಂಪೆನಿ ಎಂ.ಯು.ಸಿಗ್ಮಾ ವಿರುದ್ಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕಂಪೆನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಭುವೇಶ್ ತಂದೆ ಮಹೇಂದ್ರ ಜೈಸ್ವಾನ್ ನೀಡಿದ ದೂರಿನ ಅನ್ವಯ ವೈಟ್‌ಫೀಲ್ಡ್ ಠಾಣಾ ಪೊಲೀಸರು ಎಂ.ಯು.ಸಿಗ್ಮಾ ಕಂಪೆನಿಯ ಆಡಳಿತ ಮಂಡಳಿ ವಿರುದ್ಧ ಐಪಿಸಿ 306 ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಹೇಂದ್ರ ಜೈಸ್ವಾನ್ ಮಾತನಾಡಿ, ಕಂಪೆನಿಯಲ್ಲಿ ತನ್ನ ಮಗನಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಕಂಪೆನಿಯ ಕೆಲಸದ ಒತ್ತಡದ ಬಗ್ಗೆ ಹೇಳಿಕೊಂಡಿದ್ದ. ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದರು.