×
Ad

ಸಚಿವ ಸ್ಥಾನ ಹಂಚಿಕೆಗೆ ಪ್ರತ್ಯೇಕ ಕೋಟಾ ಅಗತ್ಯ: ಕಾಂಗ್ರೆಸ್‌ ಹೈಕಮಾಂಡ್ ಎದುರು ಅತೃಪ್ತರ ಶರತ್ತು

Update: 2018-06-12 21:08 IST

ಬೆಂಗಳೂರು, ಜೂ.12: ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್‌ಗೆ ಲಭಿಸಿರುವ ಸಚಿವ ಸ್ಥಾನಗಳನ್ನು ಹಂಚಿಕೆಗೆ ಪ್ರತ್ಯೇಕವಾದ ಕೋಟಾವನ್ನು ನಿಗದಿಪಡಿಸಬೇಕು ಎಂದು ಹೈಕಮಾಂಡ್ ಎದುರು ಅತೃಪ್ತ ಶಾಸಕರು ಹೊಸ ಶರತ್ತು ವಿಧಿಸಿದ್ದಾರೆ ಎನ್ನಲಾಗಿದೆ.

ಮಂಗಳವಾರ ನಗರದಲ್ಲಿರುವ ಮಾಜಿ ಸಚಿವ ಎಚ್.ಕೆ.ಪಾಟೀಲ್ ನಿವಾಸದಲ್ಲಿ ಎಐಸಿಸಿ ಕಾರ್ಯದರ್ಶಿ ಮಾಣಿಕ್ಯಂ ಠಾಕೂರ್ ಜೊತೆ ಅತೃಪ್ತ ಶಾಸಕರು ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಲಂಬಾಣಿ ಸಮುದಾಯಕ್ಕೆ ಒಂದು ಮಂತ್ರಿ ಸ್ಥಾನ ಸೇರಿದಂತೆ ಒಟ್ಟು ಮೂರು ಮಂತ್ರಿ ಸ್ಥಾನಗಳನ್ನು ನಮಗೆ ನೀಡಬೇಕು. ಮೂವರಿಗೆ ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕು, ಇಬ್ಬರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಬೇಕು ಎಂದು ಎಚ್.ಕೆ.ಪಾಟೀಲ್ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು ಬೇಡಿಕೆ ಮಂಡಿಸಿದ್ದಾರೆ ಎಂದು ಹೇಳಲಾಗಿದೆ.

ಮಾಣಿಕ್ಯ ಠಾಕೂರ್ ಜೊತೆಗಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಈಶ್ವರ್ ಖಂಡ್ರೆ, ಪಕ್ಷದ ಸದ್ಯದ ಪರಿಸ್ಥಿತಿ ಕುರಿತು ಚರ್ಚೆ ನಡೆಸಲಾಗಿದೆ. ನಾಳೆ ನಮ್ಮ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವುದಾಗಿ ಎಐಸಿಸಿ ಕಾರ್ಯದರ್ಶಿಗಳು ತಿಳಿಸಿದ್ದಾರೆ ಎಂದರು.

ನಾವೆಲ್ಲರೂ ಸಮಾನ ಮನಸ್ಕ ಶಾಸಕರು. ನಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಎಐಸಿಸಿ ಕಾರ್ಯದರ್ಶಿಗಳಿಗೆ ತಿಳಿಸಿದ್ದೇವೆ. ಪಕ್ಷ ಬಲವರ್ಧನೆ ಸಂಬಂಧ ಪಕ್ಷದಲ್ಲಿನ ಅಸಮಾಧಾನ ನಿವಾರಣೆ ಮಾಡುವಂತೆ ಮನವಿ ಮಾಡಿದ್ದೇವೆ. ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದು, ಅತೃಪ್ತ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ಸಂಧಾನ ಮಾತುಕತೆ ಯಶಸ್ವಿಯಾದಲ್ಲಿ ಸಚಿವ ಸಂಪುಟ ವಿಸ್ತರಣೆ ದಿನಾಂಕ ನಿಗದಿಯಾಗುವ ಸಾಧ್ಯತೆಗಳಿವೆ.
ಹಿರಿಯ ನಾಯಕ, ಮಾಜಿ ಸಚಿವ ಎಚ್.ಕೆ.ಪಾಟೀಲ್‌ಗೆ ಸಚಿವ ಸ್ಥಾನ ನೀಡುವಂತೆ ಮಾಜಿ ಸಚಿವ ಈಶ್ವರ್ ಖಂಡ್ರೆ, ಶಾಸಕರಾದ ಉಮೇಶ್ ಜಾಧವ್, ನಾರಾಯಣರಾವ್, ಶರಣಬಸಪ್ಪ ದರ್ಶನಾಪುರ್, ಸುಬ್ಬಾರೆಡ್ಡಿ, ರಹೀಂಖಾನ್ ಎಐಸಿಸಿ ಕಾರ್ಯದರ್ಶಿ ಎದುರು ಬೇಡಿಕೆ ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News