ಚೊಚ್ಚಲ ಪ್ರವೇಶದಲ್ಲಿ ಉತ್ತಮ ಪ್ರದರ್ಶನ ನಿರೀಕ್ಷೆಯಲ್ಲಿ ಪನಾಮ

Update: 2018-06-12 18:31 GMT

ಮಾಸ್ಕೊ, ಜೂ.12: ಕೇವಲ 4 ಮಿಲಿಯನ್ ಜನಸಂಖ್ಯೆ ಹೊಂದಿರುವ ಪುಟ್ಟ ರಾಷ್ಟ್ರ ಪನಾಮ ಇದೇ ಮೊದಲ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ. ಟೂರ್ನಿಯಲ್ಲಿ ಆಡುವ ಅವಕಾಶ ಪಡೆದಿರುವುದು ಪನಾಮ ತಂಡದ ಮಹತ್ವದ ಸಾಧನೆಯಾಗಿದೆ.

   ವಿಶ್ವಕಪ್ ಅರ್ಹತಾ ಸುತ್ತಿನ ಅಭಿಯಾನದ ಕೊನೆಯ ಪಂದ್ಯದಲ್ಲಿ ಪನಾಮ ತಂಡ ನೆರೆಯ ರಾಷ್ಟ್ರ ಕೋಸ್ಟರಿಕಾ ವಿರುದ್ಧ 2-1 ಅಂತರದಿಂದ ರೋಚಕ ಜಯ ಸಾಧಿಸಿ ನಾರ್ತ್, ಸೆಂಟ್ರಲ್ ಅಮೆರಿಕ ಹಾಗೂ ಕೆರಿಬಿಯನ್ ಅಸೋಸಿಯೇಶನ್ ಫುಟ್ಬಾಲ್ ಕಾನ್ಫಡರೇಶನ್ (ಕಾನ್‌ಕಾಕಾಫ್)ಕ್ವಾಲಿಫೈಯರ್‌ನಲ್ಲಿ ಮೂರನೇ ಸ್ಥಾನ ಪಡೆದಿತ್ತು. ಈ ಮೂಲಕ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು.

ಪನಾಮ ತಂಡದಲ್ಲಿರುವ 36ರ ಹರೆಯದ ಗೋಲ್‌ಕೀಪರ್ ಜೈಮಿ ಪೆನೆಡೊಗೆ 15 ವರ್ಷ ಅಂತರ್‌ರಾಷ್ಟ್ರೀಯ ಪಂದ್ಯ ಆಡಿರುವ ಅನುಭವವಿದೆ. ತನ್ನ ದೇಶದ ಪರ 130 ಪಂದ್ಯಗಳನ್ನು ಆಡಿರುವ ಪೆನೆಡೊ ಸ್ಫೂರ್ತಿದಾಯಕ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

ತಂಡದ ಇನ್ನೋರ್ವ ಹಿರಿಯ ಆಟಗಾರ ಪೆರೆಝ್ ಎಫ್‌ಸಿ ಡಲ್ಲಾಸ್ ಪರ ಮೇಜರ್ ಲೀಗ್ ಸಾಕರ್‌ನಲ್ಲಿ ಯಶಸ್ಸು ಸಾಧಿಸಿದ್ದರು. ತಂಡದ ಪ್ರಮುಖ ಸ್ಟ್ರೈಕರ್ ಆಗಿರುವ 37ರ ಹರೆಯದ ಪೆರೆಝ್ ಯುವಕರನ್ನು ನಾಚಿಸುವ ರೀತಿ ಆಡಬಲ್ಲರು.

 ಕೋಸ್ಟರಿಕಾ ವಿರುದ್ಧದದ ವಿಶ್ವಕಪ್ ಅರ್ಹತಾ ಸುತ್ತಿನ ಕೊನೆಯ ಪಂದ್ಯದ 87ನೇ ನಿಮಿಷದಲ್ಲಿ ಗೋಲು ಬಾರಿಸಿದ ರೊಮಾನ್ ಟಾರೆಸ್ ಪನಾಮ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಕಾರಣರಾಗಿದ್ದರು. ಪನಾಮದ ಓರ್ವ ಜನಪ್ರಿಯ ಆಟಗಾರನಾಗಿರುವ 32ರ ಹರೆಯದ ಡಿಫೆಂಡರ್ ರಶ್ಯದಲ್ಲಿ ಪನಾಮ ತಂಡದ ನಾಯಕನಾಗಿ ತಂಡಕ್ಕೆ ಯಶಸ್ಸು ತಂದುಕೊಡುವ ವಿಶ್ವಾಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News