ಸನ್ನಿ ಡಿಯೋಲ್ ಮುಸ್ಲಿಮರ ಕ್ಷಮೆ ಯಾಚಿಸುವರೇ?

Update: 2018-06-12 18:32 GMT

ಮಾನ್ಯರೇ,

ಭಾರತದ ನಟಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದ ಅಮೆರಿಕದ ಧಾರಾವಾಹಿ ‘ಕ್ವಾನಂಟಿಕೋ’ದಲ್ಲಿ ಭಯೋತ್ಪಾದಕರು ಹಿಂದೂ ಧರ್ಮಕ್ಕೆ ಸೇರಿದವರು ಎಂದು ತೋರಿಸಲಾಗಿತ್ತು. ಇದಕ್ಕೆ ದೇಶದ ವಿವಿಧೆಡೆ ಭಾರೀ ಪ್ರತಿಭಟನೆ ವ್ಯಕ್ತವಾಯಿತು. ನಟಿ ಪ್ರಿಯಾಂಕಾ ಚೋಪ್ರಾ ಇದಕ್ಕಾಗಿ ಕ್ಷಮೆ ಯಾಚಿಸಿಯೂ ಆಯಿತು. ಭಯೋತ್ಪಾದಕ ಹಿಂದೂ ಆಗಿದ್ದರೆ ಅದಕ್ಕೆ ಹಿಂದೂ ಧರ್ಮ ಹೊಣೆಯಲ್ಲ. ಆ ಧಾರಾವಾಹಿಯಲ್ಲಿ ಇದಕ್ಕಾಗಿ ಹಿಂದೂ ಧರ್ಮವನ್ನು ಹೊಣೆ ಮಾಡಲಾಗಿತ್ತೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈಗಾಗಲೇ ಕ್ಷಮೆ ಕೇಳಿ ಆಗಿದೆ.

ಇಡೀ ಧರ್ಮಕ್ಕೆ ಕಳಂಕ ತರುವಂತೆ ಅಲ್ಲಿ ಚಿತ್ರಿಸಿದ್ದರೆ ಕ್ಷಮೆ ಕೇಳಲೇಬೇಕು. ಆದರೆ ಇದೇ ಮಾನದಂಡದಲ್ಲಿ ನೋಡಿದರೆ ನಮ್ಮ ಭಾರತೀಯ ಚಿತ್ರರಂಗದಲ್ಲಿ ಅದೆಷ್ಟು ಸಾವಿರ ಬಾರಿ ಇಡೀ ಮುಸ್ಲಿಂ ಸಮುದಾಯವನ್ನು, ಇಸ್ಲಾಂ ಧರ್ಮವನ್ನು ಭಯೋತ್ಪಾದಕರಂತೆ ಚಿತ್ರಿಸಿಲ್ಲ? ಮಸೀದಿ, ಕುರ್‌ಆನ್, ಧಾರ್ಮಿಕ ವಿದ್ವಾಂಸರನ್ನು ಸಾರಾಸಗಟಾಗಿ ಉಗ್ರರಂತೆ ಅದೆಷ್ಟು ಬಾರಿ ತೋರಿಸಿಲ್ಲ? ಒಬ್ಬ ಮುಸ್ಲಿಂ ಉಗ್ರನಾಗಿದ್ದರೆ ಆತನ ಹೆಸರಲ್ಲಿ ಇಡೀ ಧರ್ಮಕ್ಕೆ ಮಸಿ ಬಳಿಯುವ ಕೆಲಸವನ್ನು ನಮ್ಮ ಖ್ಯಾತ ಹೀರೋಗಳು, ನಿರ್ದೇಶಕರು ಅದೆಷ್ಟು ಬಾರಿ ಮಾಡಿದ್ದಾರೆ? ನಮ್ಮ ಸನ್ನಿ ಡಿಯೋಲ್ರಂತಹ ನಾಯಕರು ಜನಪ್ರಿಯತೆ ಗಳಿಸಿದ್ದೇ ಅಂತಹ ಅಗ್ಗದ ಚಿತ್ರಗಳಿಂದ. ಒಂದು ಧಾರಾವಾಹಿಗಾಗಿ ಪ್ರಿಯಾಂಕಾ ಚೋಪ್ರಾ ಹಿಂದೂಗಳ ಕ್ಷಮೆ ಯಾಚಿಸಿದ್ದಾರೆ. ಅದೇ ರೀತಿಯ ಅದೆಷ್ಟೋ ಮುಸ್ಲಿಂ ವಿರೋಧಿ ಸಿನೆಮಾ ಮಾಡಿರುವ ಸನ್ನಿ ಡಿಯೋಲ್ ಭಾರತದ ಕೋಟ್ಯಂತರ ದೇಶಭಕ್ತ ಮುಸ್ಲಿಮರ ಕ್ಷಮೆ ಯಾಚಿಸುವರೇ ?

Writer - -ನವೀನ್ ಸುವರ್ಣ, ಮಂಗಳೂರು

contributor

Editor - -ನವೀನ್ ಸುವರ್ಣ, ಮಂಗಳೂರು

contributor

Similar News