ಪೂನಂ ಯಾದವ್ ಜೀವನಶ್ರೇಷ್ಠ ಸಾಧನೆ

Update: 2018-06-12 18:37 GMT

ಮುಂಬೈ, ಜೂ.12: ಭಾರತದ ಲೆಗ್-ಸ್ಪಿನ್ನರ್ ಪೂನಂ ಯಾದವ್ ಮಂಗಳವಾರ ಬಿಡುಗಡೆಯಾಗಿರುವ ಐಸಿಸಿ ಮಹಿಳೆಯರ ಟ್ವೆಂಟಿ-20 ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಭಡ್ತಿ ಪಡೆದು ಮೂರನೇ ಸ್ಥಾನಕ್ಕೇರಿದ್ದಾರೆ.

ಆಸ್ಟ್ರೇಲಿಯದ ವೇಗದ ಬೌಲರ್ ಮೆಗಾನ್ ಸ್ಚಟ್ ಹಾಗೂ ನ್ಯೂಝಿಲೆಂಡ್‌ನ ಆಫ್-ಸ್ಪಿನ್ನರ್ ಲೆಗ್ ಕಾಸ್ಪರೆಕ್ ಮೊದಲೆರಡು ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಕೌಲಾಲಂಪುರದಲ್ಲಿ ಕೊನೆಗೊಂಡ ಏಶ್ಯಾಕಪ್ ಟ್ವೆಂಟಿ-20 ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ 7 ವಿಕೆಟ್‌ಗಳನ್ನು ಕಬಳಿಸಿದ್ದ ಯಾದವ್ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ.

ಯಾದವ್ ಏಶ್ಯಾಕಪ್ ಫೈನಲ್‌ನಲ್ಲಿ 9 ರನ್‌ಗೆ 4 ವಿಕೆಟ್ ಕಬಳಿಸಿ ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 3 ವಿಕೆಟ್‌ಗಳಿಂದ ಸೋತಿತ್ತು. ಏಶ್ಯಾಕಪ್ ಚಾಂಪಿಯನ್ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಆಟಗಾರ್ತಿಯರ ರ್ಯಾಂಕಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿವೆ.

ಪಾಕ್‌ನ ಎಡಗೈ ಸ್ಪಿನ್ನರ್ ಆನಮ್ ಅಮಿನ್ ಏಶ್ಯಾಕಪ್‌ನ 4 ಪಂದ್ಯಗಳಲ್ಲಿ 3 ವಿಕೆಟ್‌ಗಳನ್ನು ಉರುಳಿಸಿ 13 ಸ್ಥಾನ ಭಡ್ತಿ ಪಡೆದಿದ್ದು 5ನೇ ಸ್ಥಾನ ಬಾಚಿಕೊಂಡಿದ್ದಾರೆ.

 ಏಶ್ಯಾಕಪ್ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದ ಬಾಂಗ್ಲಾದೇಶದ ಆಲ್‌ರೌಂಡರ್ ರುಮಾನಾ ಅಹ್ಮದ್ ಆರು ಸ್ಥಾನ ಮೇಲಕ್ಕೇರಿ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿದೆ.

 ಬ್ಯಾಟ್ಸ್‌ವುಮೆನ್‌ಗಳ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಒಂದು ಸ್ಥಾನ ಭಡ್ತಿ ಪಡೆದು 7ನೇ ಸ್ಥಾನಕ್ಕೇರಿದ್ದಾರೆ. ಏಶ್ಯಾಕಪ್‌ನಲ್ಲಿ 6 ಪಂದ್ಯಗಳಲ್ಲಿ ಒಟ್ಟು 215 ರನ್ ಗಳಿಸಿದ್ದ ಕೌರ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

ಇದೇ ವೇಳೆ, ಸ್ಮತಿ ಮಂಧಾನ ಎರಡು ಸ್ಥಾನ ಕೆಳಜಾರಿ 9ನೇ ರ್ಯಾಂಕಿಗೆ ಕುಸಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News