ಗೀತಾ ಪ್ರೆಸ್ ಮತ್ತು ಹಿಂದೂ, ಹಿಂದೂಯಿಸಂ, ಹಿಂದುತ್ವ

Update: 2018-06-12 18:40 GMT

ಭಾಗ-2

1940ರ ನಂತರ ಗೀತಾ ಪ್ರೆಸ್ ತನ್ನ ಕಲ್ಯಾಣ್ ಮಾಸಿಕ ಪತ್ರಿಕೆಯ ಮುಖಾಂತರ ಗಾಂಧೀಜಿಯವರನ್ನು ನಿರಂತರವಾಗಿ ಟೀಕಿಸುತ್ತ ಬಂದಿದೆ. ಗೀತಾ ಪ್ರೆಸ್ ಆಧುನಿಕ ಶಿಕ್ಷಣವನ್ನು, ಜನಸಂಖ್ಯೆ ನಿಯಂತ್ರಣವನ್ನು, ಸಿನೆಮಾವನ್ನು ತೀವ್ರವಾಗಿ ವಿರೋಧಿಸುತ್ತದೆ, ಬಾಲ್ಯ ವಿವಾಹವನ್ನು ಬೆಂಬಲಿಸುತ್ತದೆ. ಅದರ ಸಿದ್ಧಾಂತಗಳನ್ನು ವಿಶ್ಲೇಷಿಸಿದಾಗ ಇದು ಅಚ್ಚರಿ ಎನಿಸುವುದಿಲ್ಲ. ಆದರೆ ಇದು ಇಂದಿನ ತಲೆಮಾರನ್ನೂ ಸಹ ಪೊರೆಯುತ್ತಿದೆ ಎನ್ನುವುದೇ ಇಲ್ಲಿನ ಆತಂಕ. ಮಹಿಳೆಯರ ವಿಷಯದಲ್ಲಿಯೂ ಗೀತಾ ಪ್ರೆಸ್‌ನ ಧೋರಣೆಯು ಕಟ್ಟರ್‌ವಾದಿಯಾಗಿರುತ್ತದೆ. 1926ರಲ್ಲಿ ಕಲ್ಯಾಣ್ ಪತ್ರಿಕೆಯು ಸ್ತ್ರೀ ಧರ್ಮ ಎನ್ನುವ ವಿಷಯದ ಮೇಲಿನ ಪ್ರಶ್ನೋತ್ತರಗಳನ್ನು ಒಳಗೊಂಡ 46 ಪುಟಗಳ ಪುಸ್ತಕ ಪ್ರಕಟಿಸುತ್ತದೆ. ಅದರಲ್ಲಿ ಒಂದು ಕಡೆ ‘‘ಸಣ್ಣ ವಯಸ್ಸಿನಲ್ಲಿ ಬಾಲಕಿಯು ತನ್ನ ತಂದೆಯ ಅಧೀನದಲ್ಲಿರಬೇಕು, ತಾರುಣ್ಯದಲ್ಲಿ ತನ್ನ ಗಂಡನ ಅಧೀನದಲ್ಲಿರಬೇಕು, ಆಕೆಯ ಗಂಡ ಸತ್ತ ನಂತರ ತನ್ನ ಗಂಡು ಮಕ್ಕಳ ಅಧೀನದಲ್ಲಿರಬೇಕು’’ ಎಂದು ವಿವರಿಸುತ್ತದೆ. ಈ ಪುಸ್ತಕದ ಲಕ್ಷಾಂತರ ಪ್ರತಿಗಳು ಮಾರಾಟವಾಗಿವೆ ಮತ್ತು ಇಂದಿಗೂ ರೂ.5 ಮುಖಬೆಲೆಯಲ್ಲಿ ಸ್ತ್ರೀ ಧರ್ಮ ಪ್ರಶ್ನೋತ್ತರ ಪುಸ್ತಕ ಮಾರಾಟವಾಗುತ್ತದೆ. ಇಂದಿಗೂ ಗೀತಾ ಪ್ರೆಸ್‌ನ ಮಾಸಿಕ ಪತ್ರಿಕೆ ಕಲ್ಯಾಣ್‌ನ 2 ಲಕ್ಷ ಪ್ರತಿಗಳು ಮಾರಾಟವಾಗುತ್ತಿದೆ.

ಹಿಂದೂ ಮಸೂದೆ ಕೋಡ್ ಬಿಲ್ 1944ರಿಂದ ಚರ್ಚೆಯಲ್ಲಿರುತ್ತದೆ. ಇದರ ಕುರಿತಾಗಿ 1946ರ ಕಲ್ಯಾಣ್ ಪತ್ರಿಕೆಯ ಸಂಚಿಕೆಯಲ್ಲಿ ಗೊಯಂಡ್ಕ ಅವರು ಹಿಂದೂ ಸಾಮಾಜಿಕ ಚೌಕಟ್ಟಿನಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ ಎಂದು ಬರೆಯುತ್ತಾರೆ. ಸ್ವತಂತ್ರ ಭಾರತದಲ್ಲಿ ಅಂಬೇಡ್ಕರ್ ಅವರು ಕಾನೂನು ಮಂತ್ರಿಯಾಗಿ ಮರಳಿ ಹಿಂದೂ ಮಸೂದೆ ಕೋಡ್ ಬಿಲ್ ಅನ್ನು ಮತ್ತಷ್ಟು ಪರಿಷ್ಕರಿಸಿ ಸಂಸತ್ತಿನಲ್ಲಿ ಮಂಡಿಸುತ್ತಾರೆ. ಆದರೆ ಪೊದ್ದರ್ ಅವರು ಅಂಬೇಡ್ಕರ್ ಅವರನ್ನು ಕಟುವಾಗಿ ಟೀಕಿಸುತ್ತಾ ‘‘ಸಮಾನತೆಯು ಯಾವ ಕಾಲದಲ್ಲಿಯೂ ಸಂತೋಷವನ್ನು ತಂದುಕೊಟ್ಟಿಲ್ಲ, ಅಂತರ್ಜಾತಿ, ಅಂತಧರ್ಮೀಯ ವಿವಾಹ, ಬಹುಪತ್ನಿತ್ವ ನಿಷೇಧದಂತಹ ನಡೆಗಳು ಸಮಾಜವನ್ನು ನಾಶ ಮಾಡುತ್ತವೆ. ಇಂತಹ ಮದುವೆಯನ್ನು ಪ್ರೋತ್ಸಾಹಿಸುವ ಕಾನೂನನ್ನು ಯಾವ ಹಿಂದೂ ಸಹ ಸಹಿಸಿಕೊಳ್ಳುವುದಿಲ್ಲ’’ ಎಂದು ಬರೆಯುತ್ತಾರೆ. ನಲವತ್ತರ ದಶಕದುದ್ದಕ್ಕೂ ಗೀತಾ ಪ್ರೆಸ್‌ನ ಮುಖಾಂತರ ಪೊದ್ದರ್ ಅವರು ಹಿಂದೂ ಮಸೂದೆ ಕೋಡ್ ಬಿಲ್ ವಿರುದ್ಧ ಜನಾಭಿಪ್ರಾಯವನ್ನು ರೂಪಿಸುತ್ತಲೇ ಇರುತ್ತಾರೆ. ಅಕ್ಷಯ್ ಅವರು ಈ ಹಿಂದೂ ಮಸೂದೆ ಕೋಡ್ ಬಿಲ್‌ಗೆ ಆಗಿನ ಗೀತಾ ಪ್ರೆಸ್‌ನ ತೀವ್ರವಾದ ವಿರೋಧಕ್ಕೂ, ಈಗಿನ ಬಲಪಂಥೀಯರ ‘ಲವ್ ಜಿಹಾದ್’ ಹೆಸರಿನ ಹಲ್ಲೆಗಳಿಗೂ ಸಾಮ್ಯತೆ ಇದೆ ಎಂದು ಹೇಳುತ್ತಾರೆ

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮುಸ್ಲಿಮರನ್ನು ಸೇನೆಗೆ ಸೇರಿಸಿಕೊಳ್ಳುವುದನ್ನು ಗೀತಾ ಪ್ರೆಸ್ ತೀವ್ರವಾಗಿ ವಿರೋಧಿಸಿತು. ಅಕ್ಷಯ್ ‘‘ಗೀತಾ ಪ್ರೆಸ್ ಯೋಜನೆಯ ಮುಖಾಂತರ ಹಿಂದೂ ಅಸ್ಮಿತೆಯನ್ನು ಪ್ರಚಾರ ಮಾಡುವುದು, ವೈಭವೀಕರಿಸುವುದು ಗೊಯಂಡ್ಕ ಮತ್ತು ಪೊದ್ದರ್ ನಿಧನದ ನಂತರವೂ ನಿರಂತರವಾಗಿ ಮುಂದುವರಿಯುತ್ತದೆ, ಒಂದು ದಿನ ಇಂಡಿಯಾ ಹಿಂದೂ ರಾಷ್ಟ್ರವಾಗುತ್ತದೆ ಎಂದು ನಂಬಿಕೊಂಡೇ ಬಂದಿದೆ’’ ಎಂದು ಹೇಳುತ್ತಾರೆ. ವರ್ಣಾಶ್ರಮ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದ ಗೀತಾ ಪ್ರೆಸ್ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ವರ್ಷಗಳಲ್ಲಿ (1930- ಇಂದಿನವರೆಗೂ) ಹಿಂದೂಯಿಸಂನ ಏಕತೆ ಕುರಿತು ಸಮಾಜದಲ್ಲಿ ನಿರಂತರವಾಗಿ ವಿಚಾರಗಳನ್ನು, ಸಿದ್ಧಾಂತಗಳನ್ನು ಬಿತ್ತುತ್ತಾ, ಹಿಂದೂಯಿಸಂ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿದೆ. ಡಿಸೆಂಬರ್ 22-23, 1949ರಂದು ಆಗಿನ ನೆಹರೂ ಸರಕಾರವು ರಾಮ ಲಲ್ಲಾದಿಂದ ರಾಮನ ವಿಗ್ರಹಗಳನ್ನು ಕೀಳುತ್ತಾರೆ ಎನ್ನುವ ಗಾಳಿಸುದ್ದಿ ಬಂದಾಗ ಪೊದ್ದರ್ ‘‘ಒಂದು ವೇಳೆ ವಿಗ್ರಹಗಳನ್ನು ಕೀಳಲು ಅನುವು ಮಾಡಿಕೊಟ್ಟರೆ ಮುಸ್ಲಿಮರು ಆಕ್ರಮಿಸಿಕೊಂಡ ಹಿಂದೂ ದೇವಸ್ಥಾನಗಳನ್ನು ಮರಳಿ ಪಡೆಯಲು ಸಾಧ್ಯವಿಲ್ಲ’’ ಎಂದು ಪ್ರಚೋದಿಸುತ್ತಾರೆ.

ಇವರ ಈ ಪ್ರಚೋದನೆಯು 1992ರಲ್ಲಿ ಬಾಬರಿ ಮಸೀದಿ ಧ್ವಂಸದವರೆಗೂ ತನ್ನ ಪ್ರಭಾವವನ್ನು ಬೀರಿದೆ. ಲೇಖಕ ಅಕ್ಷಯ್ ಮುಕುಲ್ ಹೇಳಿದಂತೆ ಹಿಂದುತ್ವ ರಾಜಕಾರಣಕ್ಕೆ ಗೀತಾ ಪ್ರೆಸ್ ಒಂದು ಪ್ರಮುಖ ವಾಹನವಾಗಿ ತನ್ನ ಕರ್ತವ್ಯ ನಿಭಾಯಿಸಿದೆ. ಇದು ಆರೆಸ್ಸೆಸ್‌ನ ಮುಖವಾಣಿಯಂತೆ ಕರ್ತವ್ಯ ನಿರ್ವಹಿಸಿದರೂ ಸಹ ಅದನ್ನೂ ಮೀರಿ ಹಿಂದೂ ರಾಷ್ಟ್ರ, ಹಿಂದೂ ರಾಷ್ಟ್ರೀಯತೆಯಂತಹ ಸಂಕುಚಿತ, ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಸಿದ್ಧಾಂತಗಳಿಗೆ ನೀರೆರೆದು ಪೋಷಿಸಿದೆ. ಈ ಪುಸ್ತಕವು ಭಾರತದ ಸಂಪ್ರದಾಯಿಕ ಸಾಂಸ್ಕೃತಿಕ ರಾಜಕಾರಣದ ಕುರಿತು, ಬಲಪಂಥೀಯ ಕರ್ಮಠತನದ ಕುರಿತು, ಪ್ರತಿಗಾಮಿಯಾದ ಪ್ರಾಚೀನ ಭಾರತದ ಸನಾತನ ಆಚರಣೆಗಳ ಕುರಿತು ಒಂದು ಮುದ್ರಣ, ಪ್ರಕಾಶನ ಸಂಸ್ಥೆ ತನ್ನ ಸಿದ್ಧಾಂತಗಳನ್ನು ಜನಮಾನಸದಲ್ಲಿ ತುಂಬುತ್ತ ಬಂದಿದೆ ಎಂದು ವಿವರಿಸುತ್ತದೆ. ಗೀತಾ ಪ್ರೆಸ್ 80 ವರ್ಷಗಳ ತಲೆಮಾರುಗಳನ್ನು ಬಹುಸಂಖ್ಯಾತವಾದದ ಅಫೀಮಿನಲ್ಲಿ ಬೆಳೆಸಿದೆ.

ಮರೆಯುವ ಮುನ್ನ

ಇಂದು ಗೋರಕ್ಷಣೆಯ ಹೆಸರಿನಲ್ಲಿ ಮತಾಂಧರ ಪುಂಡಾಟಿಕೆ, ಹಲ್ಲೆ, ದಲಿತ-ಮುಸ್ಲಿಂ ಸಮುದಾಯದ ಮೇಲೆ ಕೋಮುವಾದಿ ಸಂಘಟನೆಗಳ ಬೆಂಬಲಿಗರಿಂದ ದೌರ್ಜನ್ಯ, ಹತ್ಯೆ, ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ಕೊಲೆ ದಿನನಿತ್ಯದ ವಿದ್ಯಮಾನಗಳಾಗಿವೆ. ಇದು ಹೇಗೆ ಹುಟ್ಟಿಕೊಂಡಿತು ? ಎಲ್ಲಿಂದ ಶುರುವಾಯಿತು? ಹೇಗೆ ಸಂಭವಿಸಿತು? ಇದಕ್ಕೆ ಅಕ್ಷಯ್ ಮುಕುಲ್ ಅವರ ಗೀತಾ ಪ್ರೆಸ್ ಮತ್ತು ಹಿಂದೂ ಇಂಡಿಯಾದ ನಿರ್ಮಾಣ ಪುಸ್ತಕದ 540 ಪುಟಗಳಲ್ಲಿ ಉತ್ತರ ದೊರಕುತ್ತದೆ.

 (ಗೀತಾ ಪ್ರೆಸ್ ಮತ್ತು ಹಿಂದೂ ಇಂಡಿಯಾದ ನಿರ್ಮಾಣ ಪುಸ್ತಕಕ್ಕೆ 2016ರಲ್ಲಿ ರಾಮನಾಥ ಗೊಯೆಂಕ ಪ್ರಶಸ್ತಿ (ಸೃಜನೇತರ) ಅದೇ ವರ್ಷ ಶಕ್ತಿ ಭಟ್ ಮೊದಲ ಪುಸ್ತಕ ಪ್ರಶಸ್ತಿ ದೊರಕಿದೆ)

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News