ಶಿರವಸ್ತ್ರ ಧರಿಸಲು ನಿರಾಕರಣೆ: ಭಾರತೀಯ ಚೆಸ್ ಪಟು ಏಷ್ಯನ್ ಟೀಮ್ ಚೆಸ್ ಚಾಂಪಿಯನ್‌ಶಿಪ್‌ನಿಂದ ಹೊರಕ್ಕೆ

Update: 2018-06-13 04:16 GMT

ಪುಣೆ, ಜೂ.13: ಮಹಿಳಾ ಗ್ರ್ಯಾಂಡ್‌ ಮಾಸ್ಟರ್ ಹಾಗೂ ವಿಶ್ವ ಜ್ಯೂನಿಯರ್ ಬಾಲಕಿಯರ ಚಾಂಪಿಯನ್ ಸೌಮ್ಯಾ ಸ್ವಾಮಿನಾಥನ್ ಅವರು ಶಿರವಸ್ತ್ರ (ಹೆಡ್‌ಸ್ಕ್ರಾರ್ಫ್) ಧರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಜುಲೈ 26ರಿಂದ ಆಗಸ್ಟ್ 4ರವರೆಗೆ ಇರಾನ್‌ನ ಹಮಾದನ್‌ನಲ್ಲಿ ನಡೆಯುವ ಏಷ್ಯನ್ ಟೀಮ್ ಚೆಸ್ ಚಾಂಪಿಯನ್‌ಶಿಪ್‌ನಿಂದ ಹೊರ ಬಿದ್ದಿದ್ದಾರೆ. ಇರಾನ್‌ನಲ್ಲಿ ಕಡ್ಡಾಯ ಶಿರವಸ್ತ್ರ ನಿಯಮ ಜಾರಿಯಲ್ಲಿದ್ದು, ಇದು ಕ್ರೀಡಾಪಟುವಿನ ವೈಯಕ್ತಿಕ ಹಕ್ಕಿನ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.

"ಬುರ್ಖಾ ಅಥವಾ ಶಿರವಸ್ತ್ರ ಧರಿಸುವಂತೆ ಒತ್ತಾಯಿಸುವುದನ್ನು ನಾನು ಇಷ್ಟಪಡುವುದಿಲ್ಲ. ಕಡ್ಡಾಯ ಶಿರವಸ್ತ್ರ ಧರಿಸಬೇಕು ಎಂಬ ಇರಾನಿಯನ್ ಕಾನೂನು ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಯೋಚನೆಯ ಸ್ವಾತಂತ್ರ್ಯ, ಆತ್ಮಸಾಕ್ಷಿ ಮತ್ತು ಧರ್ಮದ ಉಲ್ಲಂಘನೆಯಾಗುತ್ತದೆ. ಪ್ರಸ್ತುತ ಇರುವ ಏಕೈಕ ಆಯ್ಕೆಯೆಂದರೆ, ನನ್ನ ಹಕ್ಕನ್ನು ಕಾಯ್ದುಕೊಳ್ಳುವ ಸಲುವಾಗಿ ಇರಾನ್‌ಗೆ ಹೋಗದಿರುವುದು" ಎಂದು 29 ವರ್ಷದ ಸೌಮ್ಯಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತದ ಐದನೇ ರ್ಯಾಂಕಿಂಗ್ ಆಟಗಾರ್ತಿಯಾಗಿರುವ ಇವರು ವಿಶ್ವದಲ್ಲಿ 97ನೇ ಕ್ರಮಾಂಕ ಹೊಂದಿದ್ದಾರೆ. 2016ರಲ್ಲಿ ಭಾರತದ ಶೂಟರ್ ಹಿನಾ ಸಿಧು ಇದೇ ಕಾರಣಕ್ಕೆ ಏಷ್ಯನ್ ಏರ್‌ಗನ್ ಕೂಟದಲ್ಲಿ ಭಾಗವಹಿಸಿರಲಿಲ್ಲ.

"ಮೊದಲು ಭಾರತ ತಂಡದ ಭಾಗವಾಗಲು ಒಪ್ಪಿಗೆ ನೀಡಿದಾಗ, ಆತಿಥೇಯ ದೇಶ ಬಾಂಗ್ಲಾದೇಶ ಎಂದು ನಿಗದಿಯಾಗಿತ್ತು ಹಾಗೂ ದಿನಾಂಕ ಆಗಿತ್ತು. ಆದರೆ ಹೊಸ ದಿನಾಂಕ ಹಾಗೂ ಸ್ಥಳ ನಿಗದಿಯಾದಾಗ ನಾನು ಹೊರಗಿರಲು ನಿರ್ಧರಿಸಿದೆ" ಎಂದು ಅವರು ಹೇಳಿದ್ದಾರೆ. ಕೂಟವನ್ನು ಬದಲಿಸಿ ಇರಾನ್‌ಗೆ ನೀಡಿದ ಬಗ್ಗೆ ಭಾರತೀಯ ಚೆಸ್ ಫೆಡರೇಷನ್ ಪ್ರತಿಭಟನೆ ಸಲ್ಲಿಸಿದೆಯೇ ಎಂದು ಕೇಳಿದ ಪ್ರಶ್ನೆಗೆ, "ಪ್ರತಿಯೊಬ್ಬರ ಅಭಿಪ್ರಾಯವೂ ಇದೇ ಆಗಿರಬೇಕು ಎಂದು ನಾನು ನಿರೀಕ್ಷಿಸುವುದಿಲ್ಲ. ಅದು ಅವರಿಗೆ ಬಿಟ್ಟದ್ದು" ಎಂದು ಉತ್ತರಿಸಿದರು.

ಆದಾಗ್ಯೂ ತಮ್ಮ ಫೇಸ್‌ಬುಕ್ ಮೆಸೇಜ್‌ನಲ್ಲಿ ಅಧಿಕಾರಶಾಹಿ ವಿರುದ್ಧ ಸೌಮ್ಯಾ ಕೆಂಡ ಕಾರಿದ್ದಾರೆ. "ಅಧಿಕೃತ ಕೂಟಗಳನ್ನು ಆಯೋಜಿಸುವಾಗ ಆಟಗಾರರ ಹಕ್ಕು ಮತ್ತು ಕಲ್ಯಾಣಕ್ಕೆ ಮಹತ್ವ ಇಲ್ಲದಿರುವ ಬಗ್ಗೆ ತೀರಾ ಬೇಸರವಿದೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News