ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ: ಮಾಜಿ ಸಚಿವ ಎಚ್.ಎಂ.ರೇವಣ್ಣ

Update: 2018-06-13 14:09 GMT

ಬೆಂಗಳೂರು, ಜೂ.13: ಸಮ್ಮಿಶ್ರ ಸರಕಾರದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಉಂಟಾಗಿದ್ದ ಕೋಪತಾಪಗಳು ಈಗ ಶಮನಗೊಂಡಿವೆ. ಸಚಿವ ಸ್ಥಾನ ದೊರೆಯದ ಕಾರಣ ಅತೃಪ್ತಿ ವ್ಯಕ್ತಪಡಿಸಿದ್ದು ನಿಜ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ದೊಡ್ಡಮಟ್ಟದಲ್ಲಿ ದೂಷಿಸಿದ್ದೇನೆ ಎಂಬುದು ಸುಳ್ಳು ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಸ್ಪಷ್ಟಣೆ ನೀಡಿದ್ದಾರೆ.

ಬುಧವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಪುಟದಲ್ಲಿ ಅವಕಾಶ ಕೈ ತಪ್ಪಿದ್ದರಿಂದ ಸಹಜವಾಗಿಯೆ ಅಸಮಾಧಾನವಾಗುತ್ತದೆ. ಈಗ ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದರು.

ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ. ಕುರುಬ ಸಮಾಜ ಮಾತ್ರವಲ್ಲದೆ ಎಲ್ಲ ಸಮಾಜದ ಮುಂಚೂಣಿ ನಾಯಕರು. ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಹಲವು ಭಾಗ್ಯಗಳನ್ನು ನೀಡಿದ ಭಾಗ್ಯವಿಧಾತ ಎಂದು ರೇವಣ್ಣ ಕೊಂಡಾಡಿದರು. ಕೆಲವು ಮಾಧ್ಯಮಗಳಲ್ಲಿ ನನ್ನ ಸಹಜ ಅತೃಪ್ತಿಯ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಸಿದ್ದರಾಮಯ್ಯರನ್ನು ಕುರುಬ ಸಮಾಜದ ಖಳನಾಯಕ ಎಂದು ನಾನು ಎಲ್ಲಿಯೂ ಹೇಳಿಕೆ ನೀಡಿಲ್ಲ. ಅವರು ಕುರುಬ ಸಮಾಜದ ನಾಯಕ ಹೊರತು, ಖಳನಾಯಕ ಅಲ್ಲ ಎಂಬುದನ್ನು ಮಾಧ್ಯಮಗಳ ಮೂಲಕವೇ ಸ್ಪಷ್ಟಪಡಿಸುತ್ತೇನೆ ಎಂದು ರೇವಣ್ಣ ಹೇಳಿದರು.

ಕುರುಬ ಸಮಾಜದ ಎಲ್ಲ ಶಾಸಕರು ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಕುರುಬ ಸಮಾಜಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ಶುಭಸುದ್ದಿ ನೀಡಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ಅಸಮಾಧಾನಗೊಂಡ ಸಂದರ್ಭದಲ್ಲಿ ಬೇರೆ ಪಕ್ಷದ ಮುಖಂಡರು ನನ್ನನ್ನು ಆಹ್ವಾನಿಸಿದ್ದು ನಿಜ. ಆದರೆ, 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ತೊರೆಯಲಾರೆ. ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ರೇವಣ್ಣ ಹೇಳಿದರು.
ಸಮಾಜದ ಶಾಸಕರೊಬ್ಬರು ಮಾಧ್ಯಮ ವರದಿಯನ್ನೇ ನಿಜವೆಂದು ನಂಬಿ ಹೇಳಿಕೆ ನೀಡಿರುವುದು ನನಗೆ ಅಚ್ಚರಿ ತಂದಿದೆ. ಸಮಾಜದ ಹಿತದೃಷ್ಟಿಯಿಂದ ನಮ್ಮೆಲ್ಲ ಶಾಸಕರು ಸಿದ್ದರಾಮಯ್ಯರವರ ಬೆಂಬಲಕ್ಕೆ ನಿಲ್ಲಬೇಕು. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರು ರಾಷ್ಟ್ರಮಟ್ಟದಲ್ಲಿ ಮುಂಚೂಣಿ ನಾಯಕರಾಗುವ ಎಲ್ಲ ಲಕ್ಷಣಗಳು ಇವೆ ಎಂದು ಅವರು ತಿಳಿಸಿದರು.

ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಯಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿಗೆ ಅಭಿನಂದನೆ ಸಲ್ಲಿಸಿರುವ ರೇವಣ್ಣ, ಕಾಂಗ್ರೆಸ್ ಪಕ್ಷದ ಗೆಲುವು ರಾಜ್ಯದ ಜನತೆಯ ಗೆಲುವು. ಕಳೆದ ಐದು ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನೀಡಿದ ಕಾರ್ಯಕ್ರಮಗಳನ್ನು ಜಯನಗರದ ಜನತೆ ಮೆಚ್ಚಿದ್ದಾರೆ ಎಂದರು.

ಸಿದ್ದರಾಮಯ್ಯನವರ ಸರಕಾರ ಮಾಡಿರುವ ಕಾರ್ಯಕ್ರಮಗಳು ಜನರಿಗೆ ತಲುಪಿದ್ದರೂ ಕೆಲವು ಅಪಪ್ರಚಾರಗಳಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಕ್ಷೇತ್ರಗಳಲ್ಲಿಯೂ ಸೋಲುಂಟಾಗಿದೆ ಎಂದು ಅವರು ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ಆಡಳಿತ ಖಂಡಿತವಾಗಿ ಬರಲಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಆಡಳಿತವನ್ನು ಸುಲಲಿತವಾಗಿ ಕೊಂಡೊಯ್ಯುತ್ತಿದ್ದಾರೆ. ಸಮ್ಮಿಶ್ರ ಸರಕಾರ ಐದು ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸುವುದು ಖಚಿತ ಎಂದು ರೇವಣ್ಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News