ಗೌರಿ ಲಂಕೇಶ್ ಹತ್ಯೆ ಪ್ರಕರಣ: ನಾಡ ಪಿಸ್ತೂಲು ತರಬೇತಿ ಪಡೆದಿದ್ದ ಪರಶುರಾಮ್?

Update: 2018-06-13 14:16 GMT

ಬೆಂಗಳೂರು, ಜೂ.13: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧಿತನಾಗಿರುವ ಪ್ರಮುಖ ಆರೋಪಿ ಪರುಶುರಾಮ್ ಅಶೋಕ್ ವಾಗ್ಮೋರೆ, ವಿಜಯಪುರದಲ್ಲಿಯೇ ನಾಡ ಪಿಸ್ತೂಲು ತರಬೇತಿ ಪಡೆದಿದ್ದ ಎನ್ನುವ ಮಾಹಿತಿ ಸಿಟ್(ಎಸ್‌ಐಟಿ) ತನಿಖಾಧಿಕಾರಿಗಳ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಪರಶುರಾಮ್ ವಾಗ್ಮೋರೆ ಬಂಧನದ ನಂತರ ಪ್ರಕರಣ ಮತ್ತೊಂದು ಮಗ್ಗುಲಿಗೆ ತಿರುಗಿದ್ದು, ಈಗಾಗಲೇ ವಾಗ್ಮೋರೆಯನ್ನು 14 ದಿನಗಳ ಕಸ್ಟಡಿಗೆ ಪಡೆದಿರುವ ಸಿಟ್‌ಗೆ ಹಲವು ಮಾಹಿತಿಗಳು ಲಭ್ಯವಾಗಿದೆ. ಈತ ಸಂಘಪರಿವಾರದ ಸದಸ್ಯನಾಗಿ ನಾಡ ಪಿಸ್ತೂಲಿನಿಂದ ತರಬೇತಿ ಪಡೆದಿದ್ದ ಎಂದು ಮೂಲಗಳು ತಿಳಿಸಿವೆ.

ಮತ್ತೆ ಟೈಗರ್ ಗ್ಯಾಂಗ್?: ದಶಕದ ಹಿಂದೆ ವಿಜಯಪುರ ಭಾಗದಲ್ಲಿ ಸುಪಾರಿ ಕಿಲ್ಲರ್‌ಗಳಿಂದ ಕುಖ್ಯಾತಿಯಾಗಿದ್ದ ಟೈಗರ್ ಗ್ಯಾಂಗ್ ಮತ್ತೆ ಸಕ್ರಿಯವಾಗಿರುವ ಅನುಮಾನಗಳು ಶುರುವಾಗಿವೆ. ಟೈಗರ್ ಗ್ಯಾಂಗ್‌ನ ನಾಯಕರಾದ ಪ್ರವೀಣ್ ಸಿಂತ್ರೆ, ನಾಗರಾಜ ಜಂಬಗಿ ಸಾವಿನ ನಂತರ ಟೈಗರ್ ಗ್ಯಾಂಗ್‌ನ ಚಟುವಟಿಕೆಗಳು ಸ್ಥಗಿತವಾಗಿದ್ದವು. ಆದರೆ, ಬಂಧಿತ ಆರೋಪಿ ಪರುಶುರಾಮ್ ನೀಡಿರುವ ಮಾಹಿತಿಗಳ ಆಧಾರದಲ್ಲಿ ಟೈಗರ್ ಗ್ಯಾಂಗ್ ಸಕ್ರಿಯವಾಗಿರುವ ಅಂಶಗಳು ಬೆಳಕಿಗೆ ಬಂದಿದ್ದು, ಇದೀಗ ಟೈಗರ್ ಗ್ಯಾಂಗ್‌ನ ಸಕ್ರಿಯ ಹಾಗೂ ಹಳೆಯ ಸದಸ್ಯರುಗಳ ಜಾಡು ಹಿಡಿದು ಸಿಟ್ ತನಿಖೆ ಮಾಡುತ್ತಿದೆ.

ಶ್ರೀರಾಮಸೇನೆ ಬೆಂಬಲ: ಇದೆಲ್ಲಾ ಬೆಳವಣಿಗೆಗಳ ನಡುವೆ ಪರಶುರಾಮ್ ವಾಗ್ಮೋರೆಯನ್ನ ಬೆಂಬಲಿಸಿ, ಶ್ರೀರಾಮಸೇನೆಯ ರಾಜ್ಯ ಕಾರ್ಯದರ್ಶಿ ನೀಲಕಂಠ ಕಂದಗಲ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ನೈತಿಕ ಬೆಂಬಲ ನೀಡಿದ್ದಾರೆ. ವಾಗ್ಮೋರೆ ಭಾವಚಿತ್ರದ ಜೊತೆ ‘ದೇಶಕ್ಕಾಗಿ ನಿನ್ನ ಪ್ರಾಣ ಮುಡಿಪು’ ಎಂಬ ಘೋಷಣೆಗಳನ್ನ ಹಾಕಿರುವುದು ವಾಗ್ಮೋರೆ ಹಾಗೂ ನೀಲಕಂಠನ ನಂಟನ್ನು ಬಹಿರಂಗಗೊಳಿಸಿದೆ.

ಸಿಸಿಟವಿ ದೃಶ್ಯಾವಳಿ: ಪತ್ರಕರ್ತೆ ಗೌರಿ ಲಂಕೇಶ್ ವಾಸವಿದ್ದ ಇಲ್ಲಿನ ರಾಜರಾಜೇಶ್ವರಿ ನಗರ ವ್ಯಾಪ್ತಿಯ ಸಿಸಿಟಿವಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಆರೋಪಿಗಳು ತಮ್ಮ ಡೈರಿಯಲ್ಲಿ ಗೌರಿ ಲಂಕೇಶ್ 5.4 ಅಡಿ ಎತ್ತರ, ಆಕೆಯ ಮನೆ ಗೇಟಿನ ಎತ್ತರ 5 ಅಡಿ ಎಂದು ಬರೆದುಕೊಂಡಿದ್ದರು ಎನ್ನಲಾಗಿದೆ.

ಬಂಧಿತ ವಾಗ್ಮೋರೆ, ಬೆಂಗಳೂರಿನ ಸುಂಕದಕಟ್ಟೆಯ ಸುರೇಶ್ ಎಂಬಾತನ ಮನೆಯಲ್ಲಿ ಆಶ್ರಯ ಪಡೆದಿದ್ದ. ಇದಕ್ಕೆ ನವೀನ್ ಸಹಾಯ ಮಾಡಿದ್ದ ಎಂದು ಹೇಳಲಾಗುತ್ತಿದ್ದು, ಆರೋಪಿಗಳು ವಿಚಾರವಾದಿ ಕೆ.ಎಸ್.ಭಗವಾನ್ ಹತ್ಯೆಗೂ ಸಂಚು ರೂಪಿಸಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿವೆ.

ನಾಡ ಪಿಸ್ತೂಲು: ಗೌರಿ ಲಂಕೇಶ್ ಹತ್ಯೆಗೆ ಬಳಸಿರುವ ದೇಶಿ ನಿರ್ಮಿತ ಪಿಸ್ತೂಲು ಶಂಕಿತನೊಬ್ಬನ ಬಳಿಯಿದೆ ಎಂದು ಅಧಿಕಾರಿಗಳು ಶಂಕಿಸಿ ವಿಚಾರಣೆಯನ್ನು ತೀವ್ರ ಗೊಳಿಸಿದ್ದಾರೆ. ಆದರೆ, ಇಂತವರ ಬಳಿಯೇ ಪಿಸ್ತೂಲ್ ಇದೆ ಎಂಬ ತೀರ್ಮಾನಕ್ಕೆ ಬರಲು ಕಷ್ಟವಾಗುತ್ತಿದ್ದು, ಪಿಸ್ತೂಲನ್ನು ಎಲ್ಲಿ ಅಡಗಿಸಿಟ್ಟಿರಬಹುದು, ಹತ್ಯೆ ಸಂದರ್ಭದಲ್ಲಿ ಬಳಸಿದ್ದ ಬೈಕ್ ಸುಳಿವು ಸಿಕ್ಕಿಲ್ಲದಿರುವುದು ಪ್ರಕರಣ ಭೇದಿಸಲು ಕಷ್ಟವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಜಾಮೀನಿಗಾಗಿ ಅರ್ಜಿ

ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧಿತನಾಗಿರುವ ಕೆ.ಟಿ.ನವೀನ್ ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News