ಪ್ರಾಥಮಿಕ ಶಿಕ್ಷಣದಲ್ಲಿ ಸ್ಥಳೀಯ ಭಾಷೆ ನಿರ್ಲಕ್ಷಿಸಿದರೆ ಭಾಷೆಗೆ ಉಳಿಗಾಲವಿಲ್ಲ: ಪ್ರೊ.ಎಸ್.ಜಿ.ಸಿದ್ಧರಾಮಯ್ಯ

Update: 2018-06-13 14:38 GMT

ಬೆಂಗಳೂರು, ಜೂ. 13: ಶಿಕ್ಷಣದಲ್ಲಿ ಸ್ಥಳೀಯ ಭಾಷೆಯನ್ನು ಜಾರಿಗೊಳಿಸುವುದು ಭಾಷೆಯ ಉಳಿವಿನ ದೃಷ್ಟಿಯಿಂದ ಕಡ್ಡಾಯ. ಕನ್ನಡ ಭಾಷಾ ಕಲಿಕಾ ಅಧಿನಿಯಮ- 2015ನ್ನು ಪ್ರಸಕ್ತ ಸಾಲಿನಿಂದ ಎಲ್ಲ ಶಾಲೆಗಳು ಕನ್ನಡವನ್ನು ಪ್ರಥಮ-ದ್ವಿತೀಯ ಭಾಷೆಯಾಗಿ ಬೋಧಿಸುವುದು ಕಡ್ಡಾಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಬೆಂ.ಉತ್ತರ, ದಕ್ಷಿಣ ಹಾಗೂ ಬೆಂ.ಗ್ರಾಮಾಂತರ ಜಿಲ್ಲೆಯ ಖಾಸಗಿ/ಅನುದಾನ/ಅನುದಾನರಹಿತ ಶಾಲೆಗಳ ಕನ್ನಡ ಭಾಷಾ ಕಲಿಕಾ ಅಧಿನಿಯಮ ಅನುಷ್ಠಾನಕ್ಕೆ ಸಂಬಂಧ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಬೆಂಗಳೂರು ದಕ್ಷಿಣ ವಲಯದ ಉಪ ನಿರ್ದೇಶಕರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಗ್ರಾಮಾಂತರ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳು ಕಡಿಮೆಯಿದ್ದು, ಬೆಂ. ನಗರ ಉತ್ತರ ವಲಯದಲ್ಲಿ ಆಡಳಿತವು ವಿಫಲವಾಗಿರುವುದಾಗಿ ಕಂಡು ಬಂದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾಯ್ದೆಯ ಅನುಷ್ಠಾನದಲ್ಲಿ ಖಾಸಗಿ ಶಾಲೆಗಳಲ್ಲಿ ನಕಾರಾತ್ಮಕ ಧೋರಣೆ ಕಂಡುಬಂದಿದೆ. ಅದರಲ್ಲಿ ಅನೇಕ ಶಾಲೆಗಳು ರಾಜ್ಯ ಸರಕಾರದ ಪಠ್ಯಕ್ರಮವನ್ನೇ ಬಳಸದಿರುವುದು ಕಂಡು ಬಂದಿದೆ. ಆದುದರಿಂದ ಕನ್ನಡ ಭಾಷಾ ಕಲಿಕಾ ಕಾಯ್ದೆ ಅನ್ವಯ ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದು ಕಡ್ಡಾಯ. ಅದನ್ನು ಈ ತಿಂಗಳಿನಿಂದಲೇ ಅನುಷ್ಠಾನಗೊಳಿಸತಕ್ಕದ್ದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಾಧಿಕಾರ ಸೂಚಿಸಿದೆ. ದಯಾನಂದ ಸಾಗರ್ ಇಂಟರ್ ನ್ಯಾಷನಲ್, ಆಫ್ಲೈನ್, ನಾರಾಯಣ ಟೆಕ್ನೊ, ಎನ್‌ಇಟಿ, ಇನ್ಸಿಫ್ರೀ, ಆಕ್ಸ್ಫರ್ಡ್, ಇಂಡಿಯನ್ ಪಬ್ಲಿಕ್ ಸ್ಕೂಲ್, ರವೀಂದ್ರ ಭಾರತ, ಇನ್ನೋವೆಟಿವ್, ಎನ್‌ಎಸ್‌ಎಂ, ಆರ್‌ಎಂ ಎಸ್, ಈಸ್ಟ್ ವೆಸ್ಟ್ ಅಕಾಡೆಮಿ ಸೇರಿದಂತೆ ಹಲವು ಶಾಲೆಗಳು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಬೋಧಿಸುತ್ತಿಲ್ಲ. ಹೀಗಾಗಿ ಕಾಯ್ದೆಯನ್ವಯ ಈ ಎಲ್ಲ ಶಾಲೆಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡಬೇಕು. ದಂಡ ವಿಧಿಸಿ, ಶಾಲೆಯ ಮಾನ್ಯತೆ ರದ್ದುಗೊಳಿಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರ ಸರಕಾರಕ್ಕೆ ಶಿಫಾರಸು ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ಲೋಪವನ್ನು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದ್ದು, ಶಿಕ್ಷಣದಲ್ಲಿ ಕನ್ನಡವನ್ನು ಉಳಿಸುವ ಸಲುವಾಗಿ ಪ್ರಾಧಿಕಾರ ಸದರಿ ಅಧಿನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಎಲ್ಲ ಸಕ್ಷಮ ಪ್ರಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿರುವುದಲ್ಲದೆ ಪ್ರಾಧಿಕಾರದಿಂದ ಒಂದು ಪರಿಶೀಲನಾ ತಂಡವನ್ನು ರೂಪಿಸಿ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಎಲ್ಲ ಖಾಸಗಿ/ಅನುದಾನ/ಅನುದಾನರಹಿತ ಶಾಲೆಗಳಲ್ಲಿ ಪೂರ್ವ ಸೂಚನೆ ನೀಡದೆ ಪರಿಶೀಲನೆ ನಡೆಸುವುದು. ಒಂದು ವೇಳೆ ಅಲ್ಲಿಯೂ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಶಾಲೆಯ ಮಾನ್ಯತೆ ರದ್ದುಪಡಿಸಲು ಸರಕಾರಕ್ಕೆ ಪ್ರಾಧಿಕಾರವೇ ಶಿಫಾರಸು ಮಾಡುವುದು ಎಂದು ತಿಳಿಸಿದರು.

ಪ್ರಾಧಿಕಾರವು 1 ಮತ್ತು 2ನೆ ತರಗತಿಯಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆಯನ್ನು ನೀಡುವಂತೆ ಸೂಚಿಸಲಾಗಿದ್ದು, ಕಾಯ್ದೆ ಅನುಷ್ಠಾನಗೊಳಿಸಲು ಕೂಡಲೇ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಬೆಂಗಳೂರು ಉತ್ತರ ವಲಯದ ವಿವರ ಅಪೂರ್ಣವಾಗಿದ್ದು ಸಂಬಂಧಪಟ್ಟ ಉಪನಿರ್ದೇಶಕರಿಗೆ ಕೂಡಲೇ ಎಲ್ಲ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಸ್ಪಷ್ಟ ಮಾಹಿತಿ ನೀಡಲು ಎಚ್ಚರಿಕೆ ನೀಡಲಾಗಿದೆ ಎಂದರು.

ಬೆಂ.ಗ್ರಾ.ದಲ್ಲಿ 46 ಆಂಗ್ಲ ಭಾಷೆಯ ಮತ್ತು 14 ಉರ್ದು ಶಾಲೆಗಳಲ್ಲಿದ್ದು, ಕಾಯ್ದೆ ಅನುಷ್ಠಾನಗೊಂಡಿರುವುದಿಲ್ಲ. ದೇವನಹಳ್ಳಿ, ಹೊಸಕೋಟೆ ತಾಲೂಕಿನ ವಿವರಗಳು ಅಪೂರ್ಣವಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿನ 398 ಶಾಲೆಗಳಲ್ಲಿ ಕಾಯ್ದೆ ಅನುಷ್ಠಾನಗೊಂಡಿದೆ ಎಂದರು. ಕಾಯ್ದೆ ಅನುಷ್ಠಾನಗೊಳಿಸದೇ ಇದ್ದಲ್ಲಿ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವ ಎಚ್ಚರಿಕೆ ನೀಡಲಾಗಿದೆ ಎಂದು ಅವರು, ಐಜಿಸಿಎಸ್ ಮತ್ತು ಐಬಿ ಶಾಲೆಗಳಿಗೂ ರಾಜ್ಯ ಸರಕಾರದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ ಎಂದರು.

‘ಕನ್ನಡ ಭಾಷೆ ಬೋಧಿಸದ ಎಲ್ಲ ಶಾಲೆಗಳಿಗೆ ಕೂಡಲೇ ನೋಟೀಸ್ ಜಾರಿ ಮಾಡಬೇಕು. ದಂಡ ವಿಧಿಸಿ, ಶಾಲೆಯ ಮಾನ್ಯತೆ ರದ್ದುಗೊಳಿಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರ ಸರಕಾರಕ್ಕೆ ಶಿಫಾರಸು ಮಾಡುವಂತೆ ಸೂಚನೆ ನೀಡಲಾಗಿದೆ’
-ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News