ಗೌರಿ ಲಂಕೇಶ್ ಹತ್ಯೆ ಪ್ರಕರಣ: ರೇಖಾ ಚಿತ್ರ-ವಾಗ್ಮೋರೆ ಹೋಲಿಕೆ?

Update: 2018-06-13 15:21 GMT

ಬೆಂಗಳೂರು, ಜೂ.13: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧಿತನಾಗಿರುವ ಹಿಂದುತ್ವ ಸಂಘಟನೆಯೊಂದರ ಸದಸ್ಯ ಪರುಶುರಾಮ್ ವಾಗ್ಮೋರೆ ಮುಖ ಹಾಗೂ ಸಿಟ್(ಎಸ್‌ಐಟಿ) ಬಿಡುಗಡೆಗೊಳಿಸಿದ್ದ ಶಂಕಿತ ಆರೋಪಿಗಳಲ್ಲಿ ರೇಖಾ ಚಿತ್ರವೊಂದು ಹೋಲಿಕೆಯಾಗಿದೆ ಎನ್ನಲಾಗಿದೆ.

2017ರ ಅಕ್ಟೋಬರ್ 14ರಂದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ಮುಖ್ಯಸ್ಥ ಬಿ.ಕೆ.ಸಿಂಗ್, ತನಿಖಾಧಿಕಾರಿ ಅನುಚೇತ್ ಸೇರಿ ಪ್ರಮುಖರು, ಶಂಕಿತ ಆರೋಪಿಗಳ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಹತ್ಯೆ ಕುರಿತ ಮಹತ್ವದ ಸುಳಿವಾಗಿ ರೇಖಾಚಿತ್ರಗಳನ್ನು ಪರಿಗಣಿಸಲಾಗಿದೆ. ಅಷ್ಟೇ ಅಲ್ಲದೆ, ಎಸ್‌ಐಟಿ ಅಧಿಕಾರಿಗಳು ಮಾಧ್ಯಮಗಳ ಮುಂದೆ ಇಬ್ಬರು ಶಂಕಿತ ಆರೋಪಿಗಳ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿ, ಸಾರ್ವಜನಿಕರು ಇವರ ಬಗ್ಗೆ ಮಾಹಿತಿ ನೀಡುವಂತೆ ಕೋರಿ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮೀಸಲಿಟ್ಟಿದ್ದರು. ಜೊತೆಗೆ 10 ಲಕ್ಷ ರೂ. ನಗದು ಬಹುಮಾನ ಘೋಷಣೆ ಮಾಡಿದ್ದರು. ಆದರೆ, ಇದೀಗ ಬಂಧನವಾಗಿರುವ ಪರಶುರಾಮ್ ಹಾಗೂ ರೇಖಾಚಿತ್ರದಲ್ಲಿರುವ ವ್ಯಕ್ತಿಯೂ ಒಂದೇ ಎಂದು ತನಿಖಾಧಿಕಾರಿಗಳಿಗೆ ಸ್ಪಷ್ಟವಾಗಿದೆ ಎನ್ನಲಾಗಿದೆ.

ಚಿತ್ರದಲ್ಲಿ ಏನಿದೆ?: ತನಿಖಾಧಿಕಾರಿಗಳು, ಚಿತ್ರಕಲಾವಿದರ ಸಹಾಯದಿಂದ ಹಂತಕರು 25-35 ವರ್ಷದೊಳಗಿನವರು ಎಂದು ಅಂದಾಜಿಸಿ, ರೇಖಾಚಿತ್ರವನ್ನು ಕಂಪ್ಯೂಟರ್‌ನಲ್ಲಿ ರೂಪಿಸದೆ, ತಯಾರಿಸಿದ್ದರು. ಅದರಂತೆಯೇ, ಇದೀಗ ಬಂಧಿತನಾಗಿರುವ ಓರ್ವ ರೇಖಾಚಿತ್ರದಲ್ಲಿರುವ ವ್ಯಕ್ತಿಯಂತೆ ದಿಟ್ಟವಾಗಿ ಕಂಡಿದ್ದಾನೆ ಎನ್ನಲಾಗಿದೆ.

ಅಲ್ಲದೆ, ಹಂತಕರನ್ನು ನೋಡಿದರೆನ್ನಲಾದ ಕೆಲ ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸಿ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕಿದ್ದರು. ಸ್ಥಳೀಯರ ಹೇಳಿಕೆ ಹಾಗೂ ಗೌರಿ ಲಂಕೇಶ್ ಅವರ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ 10 ಸೆಕೆಂಡ್ ದೃಶ್ಯಾವಳಿ ಆರಿಸಿ ರೇಖಾಚಿತ್ರ ಸಿದ್ಧಪಡಿಸಲಾಗಿತ್ತು.

‘ಗೌರಿ ಹಂತಕ ನಾನೇ’
ಈಗಾಗಲೇ ಬಂಧಿತನಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಪರಶುರಾಮ್ ವಾಗ್ಮೋರೆ, ಗೌರಿ ಲಂಕೇಶ್ ಅವರನ್ನು ಹತ್ಯೆಗೈದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಆದರೆ, ಈ ಕೃತ್ಯಕ್ಕೆ ಪ್ರೇರಣೆ ಯಾರು, ಪಿಸ್ತೂಲು, ಬೈಕ್ ಎಲ್ಲಿ ಎಂಬ ಪ್ರಶ್ನೆಗಳಿಗೆ ಆತ ಉತ್ತರಿಸಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆಯೂ ತನಿಖಾಧಿಕಾರಿಗಳು ಸ್ಪಷ್ಟನೆ ನೀಡಲು ನಿರಾಕರಿಸಿದ್ದಾರೆ.

Writer - -ಸಮೀರ್,ದಳಸನೂರು

contributor

Editor - -ಸಮೀರ್,ದಳಸನೂರು

contributor

Similar News