ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸದ್ಯಕ್ಕಿಲ್ಲ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

Update: 2018-06-13 15:25 GMT

ಬೆಂಗಳೂರು, ಜೂ. 13: ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ಟಿ) ವಿದ್ಯಾರ್ಥಿಗಳ ಮಾದರಿಯಲ್ಲೆ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆ ಇನ್ನೂ ಪರಿಶೀಲನೆ ಹಂತದಲ್ಲಿದ್ದು, ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಗೆ ಹಣಕಾಸು ಇಲಾಖೆ ಆಕ್ಷೇಪಿಸಿತ್ತು. ಹೀಗಾಗಿ ಈ ಯೋಜನೆ ಜಾರಿಗೊಳಿಸುವ ಬಗ್ಗೆ ಚರ್ಚಿಸಬೇಕಿದೆ ಎಂದರು.

ಸಾರಿಗೆ ನಿಗಮಗಳು ತಲಾ 500 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸುತ್ತಿವೆ. ಹೀಗಾಗಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಸರಕಾರದ ಅನುದಾನ ಅಗತ್ಯ. ಉಚಿತ ಬಸ್ ಪಾಸ್ ಯೋಜನೆಗೆ 626 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಲಿದೆ ಎಂದು ಅವರು ತಿಳಿಸಿದರು.

ಕಾಲೇಜುಗಳಲ್ಲೆ ಪಾಸ್: ಕೆಎಸ್ಸಾರ್ಟಿಸಿ, ಬಿಎಂಟಿಸಿ ಕೌಂಟರ್‌ಗಳ ಜತೆಗೆ ಶಾಲಾ-ಕಾಲೇಜುಗಳಲ್ಲೆ ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ವಿತರಣೆ ಮಾಡಲಾಗುವುದು ಎಂದ ಅವರು, ಈ ನೂತನ ವ್ಯವಸ್ಥೆ ದೇಶದಲ್ಲೆ ಪ್ರಪ್ರಥಮ ಎಂದು ಹೇಳಿದರು.

ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಇನ್ನು ಅಲೆದಾಡಬೇಕಿಲ್ಲ. ಶಾಲೆ ಮತ್ತು ಕಾಲೇಜಿಗೆ ಸೇರುವ ವೇಳೆ ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ದಾಖಲಾದಾಗ ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿ ಸಮಗ್ರ ಮಾಹಿತಿ ಅಪ್‌ಲೋಡ್ ಆಗಲಿದ್ದು, ಅನಂತರ ಆ ಮಾಹಿತಿ ಸಾರಿಗೆ ಇಲಾಖೆಯ ವೆಬ್‌ಸೈಟ್‌ಗೆ ಜೋಡಣೆಯಾಗಲಿದ್ದು, ಅದನ್ನು ಆಧರಿಸಿ ಪಾಸ್ ವಿತರಣೆ ಮಾಡಲಾಗುವುದು ಎಂದರು.

ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಆದರೆ ಸಂಸ್ಕರಣಾ ಶುಲ್ಕ 150 ರೂ.ಪಾವತಿಸಬೇಕು. ಪ್ರೌಢ ಶಾಲಾ ವಿದ್ಯಾರ್ಥಿನಿಯರಿಗೆ-600ರೂ., ಬಾಲಕರಿಗೆ 800 ರೂ., ಕಾಲೇಜು ವಿದ್ಯಾರ್ಥಿಗಳಿಗೆ 1,100 ರೂ.ಪಾವತಿಸಿ ಪಾಸ್ ಪಡೆಯಬಹುದು ಎಂದರು.

ಮೆಟ್ರೋ, ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಮೂಹ ಸಾರಿಗೆ ವ್ಯವಸ್ಥೆಯನ್ನು ಸಾರ್ವಜನಿಕರು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುವುದು ಎಂದ ಅವರು, ಖಾಸಗಿ ಬಸ್ ಮಾಲಕರಿಗೂ ನಿಲ್ದಾಣ ವ್ಯವಸ್ಥೆ ಕಲ್ಪಿಸಲು ಗಮನ ಹರಿಸಲಾಗುವುದು ಎಂದರು.

‘ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಅನುಷ್ಠಾನ ಸಂಬಂಧ ಚರ್ಚಿಸಲಾಗುವುದು. ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಗ್ಗೆ ಬಜೆಟ್‌ನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಸೇರಿಸುವ ನಿರೀಕ್ಷೆ ಇದೆ’
-ಡಿ.ಸಿ.ತಮ್ಮಣ್ಣ ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News