ಕಾರ್ಪೋರೇಟ್ ವಲಯದಂತೆ ಕಾರ್ಯ ನಿರ್ವಹಿಸಿ: ಅಧಿಕಾರಿಗಳಿಗೆ ಸಿ.ಎಂ ಕುಮಾರಸ್ವಾಮಿ ಸಲಹೆ

Update: 2018-06-14 12:49 GMT

ಬೆಂಗಳೂರು, ಜೂ. 14: ಸರಕಾರಿ ವ್ಯವಸ್ಥೆಯಲ್ಲೂ ಕಾರ್ಪೋರೇಟ್ ವಲಯಗಳಲ್ಲಿ ಕೆಲಸ ಮಾಡುವಂತೆ ಕಾರ್ಯ ನಿರ್ವಹಿಸಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹವಾಮಾನ, ಕುಡಿಯುವ ನೀರು, ಮಳೆ ಹಾನಿ ಕುರಿತು ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಂದೇ ಕುಟುಂಬದವರು. ಆಡಳಿತ ವ್ಯವಸ್ಥೆಯಲ್ಲಿ ಸರಕಾರದ ನಿರ್ಧಾರಗಳು ಒಂದು ಭಾಗವಾದರೆ, ಅವುಗಳನ್ನು ಜನ ಸಾಮಾನ್ಯರಿಗೆ ತಲುಪಿಸುವುದು ಮತ್ತೊಂದು ಭಾಗ. ಸರಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬೇಕಾದರೆ ಅಧಿಕಾರಿಗಳ ಪಾತ್ರ ಪ್ರಮುಖ. ಅನಗತ್ಯವಾಗಿ ವ್ಯವಸ್ಥೆಯ ಲೋಪ-ದೋಷಗಳನ್ನು ಮೆಲುಕು ಹಾಕುವುದಕ್ಕಿಂತಲೂ ಮುಂದೆ ತುಳಿಯಬೇಕಾದ ಯಶಸ್ಸಿನ ಹಾದಿ ಕುರಿತು ಚಿಂತನೆ ನಡೆಸಿ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವುದು ಅತ್ಯಾವಶ್ಯಕ. ಕೇಂದ್ರದಿಂದ ಅತಿಹೆಚ್ಚು ಆರ್ಥಿಕ ನೆರವು ಪಡೆಯುವುದು ಹೇಗೆ? ಕೇಂದ್ರದಿಂದ ದೊರೆತಿರುವ ಅನುದಾನವನ್ನು ಗರಿಷ್ಠ ಪ್ರಮಾಣದಲ್ಲಿ ಸದ್ವಿನಿಯೋಗ ಮಾಡುವುದು ಹೇಗೆ? ಎಂಬುದರ ಬಗ್ಗೆ ಅಧಿಕಾರಿಗಳು ಆಲೋಚಿಸಬೇಕಾಗಿದೆ ಎಂದರು.

ಸಮಸ್ಯೆಗಳು ಸ್ಥಳೀಯವಾಗಿ ಬಗೆಹರಿದಲ್ಲಿ ಒತ್ತಡ ಕಡಿಮೆ. ಜನತಾ ದರ್ಶನದ ಸಂದರ್ಭದಲ್ಲಿ ಜಿಲ್ಲಾ ಕೇಂದ್ರಗಳು ಹಾಗೂ ತಾಲೂಕು ಕೇಂದ್ರಗಳಿಂದ ಪ್ರತಿದಿನವೂ ಸಾವಿರಕ್ಕೂ ಹೆಚ್ಚು ಮಂದಿ ತಮ್ಮನ್ನು ಭೇಟಿ ಮಾಡಿ ಕುಂದು-ಕೊರತೆಗಳನ್ನು ನಿವೇದಿಸಿಕೊಳ್ಳಲು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ದೊರೆತರೆ ಅವರೇಕೆ ರಾಜಧಾನಿಗೆ ಬರುತ್ತಾರೆ? ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಹಂತದಲ್ಲೇ ಸಮಸ್ಯೆಗಳನ್ನು ಬಗೆಹರಿಸಿದಲ್ಲಿ ಸಿಎಂ ಮೇಲೆ ಒತ್ತಡ ಕಡಿಮೆಯಾಗುತ್ತದೆ ಎಂದರು.

ಜನಸ್ನೇಹಿ ಸರಕಾರ ರೂಪಿಸಿ: ಶಿಕ್ಷಣ ಹಕ್ಕು ಕಾಯ್ದೆಯ ಲಾಭ ಅರ್ಹರಿಗೆ ತಲುಪುತ್ತಿಲ್ಲವೆಂಬ ದೂರುಗಳಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದಿಂದ ವಾರ್ಷಿಕ 600 ಕೋಟಿಯಿಂದ 800 ಕೋಟಿ ರೂ.ವರೆಗೆ ಹಣ ಪಡೆಯುತ್ತಿದ್ದರೂ, ಅಧಿಕಾರಿಗಳನ್ನು ಕೆಟ್ಟರೀತಿಯಲ್ಲಿ ನಡೆಸಿಕೊಳ್ಳುತ್ತಿವೆ ಎಂದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪ ನಿರ್ದೇಶಕರು ತಪ್ಪುದಾರಿ ತುಳಿದಿದ್ದಾರೆಯೇ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಶಾಮೀಲಾಗಿದ್ದಾರೆಯೇ? ಎಂಬ ಸಂಶಯ ಸೃಷ್ಟಿಯಾಗುತ್ತದೆ.

ಈ ನ್ಯೂನತೆಗಳನ್ನು ಕೂಡಲೇ ಸರಿಪಡಿಸಿ. ಸರಕಾರಿ ಶಾಲೆಗಳಲ್ಲಿನ ಗುಣಮಟ್ಟವನ್ನು ಉತ್ತಮಪಡಿಸಿ. ಆರೋಗ್ಯ, ವಸತಿ, ಶಿಕ್ಷಣ, ಕುಡಿಯುವ ನೀರು ಸೌಲಭ್ಯವನ್ನು ಪಡೆಯಲು ಜನ ಬಯಸುತ್ತಾರೆ. ಶಿಕ್ಷಣ, ನಿರುದ್ಯೋಗ, ವಿಕಲಚೇತನರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳನ್ನು ಪರಿಹರಿಸಲು ಹೆಚ್ಚಿನ ಆಸಕ್ತಿ ತೋರಿ. ಒಳ್ಳೆಯ ಅಧಿಕಾರಿಗಳಿಗೆ ಸರಕಾರದ ರಕ್ಷಣೆ ಇದೆ. ಜನಸ್ನೇಹಿ ಸರಕಾರವನ್ನು ರೂಪಿಸಬೇಕು ಎಂದು ನಿರ್ದೇಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News