ರಾಜ್ಯದಲ್ಲಿ 5 ಲಕ್ಷ ಮನೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಿ: ಜಿಲ್ಲಾಧಿಕಾರಿಗಳಿಗೆ ಕುಮಾರಸ್ವಾಮಿ ಸೂಚನೆ

Update: 2018-06-14 13:13 GMT

ಬೆಂಗಳೂರು, ಜೂ. 14: ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಕೌಶಲ್ಯಾಭಿವೃದ್ಧಿ ಇಲಾಖೆ ಮೂಲಕ ತರಬೇತಿ ಕೊಡಿಸಬೇಕು. ಆ ನಿಟ್ಟಿನಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಆಸ್ಥೆ ವಹಿಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲು 50 ಲಕ್ಷ ರೂ., ಪ್ರಾದೇಶಿಕ ಉದ್ಯೋಗ ಮೇಳ ಆಯೋಜಿಸಲು 75 ಲಕ್ಷ ರೂ. ಹಾಗೂ ರಾಜ್ಯ ಮಟ್ಟದಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲು 1 ಕೋಟಿ ರೂ.ಅನುದಾನ ಮೀಸಲಿರಿಸಿದೆ. ಇದರ ಪರಿಣಾಮಕಾರಿ ಅನುಷ್ಠಾನ ಕುರಿತು ಬೆಳಕು ಚೆಲ್ಲಿ ಈ ಉದ್ಯೋಗ ಮೇಳಗಳಿಂದ ಎಷ್ಟು ಮಂದಿಗೆ ಉದ್ಯೋಗ ಲಭಿಸಿದೆ? ಎಂದು ಮಾಹಿತಿ ಕೊಡಿ ಎಂದರು.

ಸರಕಾರಿ ಭೂಮಿ ಕುರಿತ ಮಾಹಿತಿ ಕಲೆ ಹಾಕಿ: ಕೇಂದ್ರ ಸರಕಾರದ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ರಾಜ್ಯದ ಎಲ್ಲ ಗ್ರಾಮ, ಹೋಬಳಿ, ತಾಲೂಕುಗಳಲ್ಲಿ ಹಾಗೂ ಜಿಲ್ಲೆಗಳಲ್ಲಿ ಲಭ್ಯವಿರುವ ಸರಕಾರಿ ಭೂಮಿ ಕುರಿತ ಮಾಹಿತಿ ಕಲೆ ಹಾಕಿ ಎಂದು ಅವರು ಸೂಚಿಸಿದರು.

ನೀಲ ನಕ್ಷೆ ಸಿದ್ಧಪಡಿಸಿ: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 2ಲಕ್ಷ ಮನೆಗಳ ನಿರ್ಮಾಣವೂ ಸೇರಿದಂತೆ ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 5 ಲಕ್ಷ ಮನೆಗಳ ನಿರ್ಮಾಣ ಮಾಡಲು ನೀಲ ನಕ್ಷೆ ಸಿದ್ದಪಡಿಸಬೇಕು. ಸರಕಾರಿ ಭೂಮಿ ಲಭ್ಯವಿರದ ಸ್ಥಳಗಳಲ್ಲಿ ಖಾಸಗಿಯವರಿಂದ ಭೂಮಿ ಖರೀದಿಸಿ. ವಸತಿ ಯೋಜನೆಗಳಲ್ಲಿ ಬಡವರಿಗೆ ಸೂರು ಒದಗಿಸಲು ಸಹಕರಿಸಬೇಕು. ಖಾತೆ ಮತ್ತು ಪಹಣಿ ನೋಂದಣಿ ಮತ್ತು ವರ್ಗಾವಣೆ ಇವೆಲ್ಲವೂ ಕಾಲಮಿತಿಯಲ್ಲಿ ನಡೆಯಲಿ ಎಂದರು.

ಸಾಮಾನ್ಯ ಕನಿಷ್ಠ ಕಾರ್ಯಕ್ರಮ: ಮೈತ್ರಿ ಸರಕಾರದಲ್ಲಿ ಜನರಿಗೆ ಯಾವುದೇ ತೊಂದರೆಯಾಗದೆ ಸುಗಮವಾಗಿ ಕೆಲಸಗಳಾಗುವ ವಾತಾವರಣ ಸೃಷ್ಟಿಯಾದಲ್ಲಿ ಹಾಗೂ ನೊಂದವರಿಗೆ ಪೊಲೀಸ್ ಠಾಣೆಗಳಲ್ಲಿ ನ್ಯಾಯ ಸಿಕ್ಕರೆ ಅದುವೇ ಉತ್ತಮ ಆಡಳಿತ ಎಂದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮೈತಿ ಸರಕಾರ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಿ ಆದ್ಯತೆಗಳೇನು? ಎಂಬುದನ್ನು ಬಹಿರಂಗಪಡಿಸಲಿದೆ ಎಂದು ಹೇಳಿದರು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಸಿಎಂ ಆರ್ಥಿಕ ಸಲಹೆಗಾರ ಡಾ.ಎಸ್.ಸುಬ್ರಮಣ್ಯ, ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಅಪರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಸಿಎಂ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಜರಿದ್ದರು.

‘ಬೆಂಗಳೂರಿನಲ್ಲಿ 2 ಲಕ್ಷ ಮನೆಗಳ ನಿರ್ಮಾಣ ಸೇರಿ ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ 5 ಲಕ್ಷ ಮನೆಗಳ ನಿರ್ಮಾಣ ಮಾಡಲು ನೀಲ ನಕ್ಷೆ ಸಿದ್ದಪಡಿಸಬೇಕು. ಸರಕಾರಿ ಭೂಮಿ ಲಭ್ಯವಿರದ ಸ್ಥಳಗಳಲ್ಲಿ ಖಾಸಗಿಯವರಿಂದ ಭೂಮಿ ಖರೀದಿಸಬೇಕು’

-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News