ಪ್ರಕೃತಿ ವಿಕೋಪ ಪರಿಹಾರ ಘಟಕ ಅಗತ್ಯ: ಡಿಸಿಎಂ ಡಾ.ಜಿ.ಪರಮೇಶ್ವರ್

Update: 2018-06-14 13:15 GMT

ಬೆಂಗಳೂರು, ಜೂ. 14: ಮಳೆ, ಅತಿವೃಷ್ಟಿ ಸೇರಿದಂತೆ ಪ್ರಕೃತಿ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ತಕ್ಷಣವೇ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರಕೃತಿ ವಿಕೋಪ ಪರಿಹಾರ ಘಟಕವನ್ನು ಆರಂಭಿಸಬೇಕಾದ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಒಳ್ಳೆಯ ಆಡಳಿತ ನೀಡಬೇಕೆನ್ನುವುದು ಮೈತ್ರಿ ಸರಕಾರದ ಉದ್ದೇಶ. ಕೆಲವೇ ದಿನಗಳಲ್ಲಿ ಸರಕಾರದ ಆದ್ಯತೆಗಳನ್ನು ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಪ್ರಕಟಿಸಲಾಗುತ್ತದೆ. ಇದನ್ನು ಜನರಿಗೆ ಸಕಾಲದಲ್ಲಿ ತಲುಪಿಸಬೇಕು. ಮುಖ್ಯವಾಗಿ ಈಗ ಮಳೆಯಾಗುತ್ತಿದೆ. ಮುಂದೆ ಇನ್ನಷ್ಟು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಈ ಬಗ್ಗೆ ಅಧಿಕಾರಿಗಳು ಆಸ್ಥೆ ವಹಿಸಬೇಕು ಎಂದು ಸಲಹೆ ನೀಡಿದರು.

ಸರಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಈ ಶಾಲೆಗಳ ಸಬಲೀಕರಣಕ್ಕೆ ಏನು ಮಾಡಬೇಕು ಎನ್ನುವುದನ್ನು ಪಟ್ಟಿ ಮಾಡಬೇಕು ಎಂದ ಅವರು, ಜನರ ಆರೋಗ್ಯದ ಬಗ್ಗೆ ಗಮನಹರಿಸಬೇಕು. ಸರಕಾರಿ ಆಸ್ಪತ್ರೆಗಳತ್ತ ಜನ ಬರುವಂತಹ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.

ನಿರುದ್ಯೋಗಿ ಯವಕರಿಗೆ ಕೆಳಹಂತದಲ್ಲೇ ಉದ್ಯೋಗ ನೀಡಲು ಮುಂದಾದರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನಿರುದ್ಯೋಗ ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಲಿದೆ. ಹೀಗಾಗಿಯೇ ವೆೆುತ್ರಿ ಸರಕಾರ ನಿರುದ್ಯೋಗ ನಿವಾರಣೆಗೆ ಆದ್ಯತೆ ನೀಡಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳು ಹೆಚ್ಚಾಗುತ್ತಿದ್ದು, ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಏಕೆ ಸಾಧ್ಯವಿಲ್ಲ? ಇದಕ್ಕೆ ನಾವು ಕೂಡಲೇ ಉತ್ತರ ಕಂಡುಹಿಡಿಯಬೇಕಾಗಿದೆ. ಶಿಕ್ಷಣದ ಗುಣಮಟ್ಟವನ್ನು ಉತ್ತಮ ಪಡಿಸಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ’
-ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News