ಶಾಲೆಗಳ ವಿಲೀನ ಪ್ರಕ್ರಿಯೆ ಖಂಡನೆ

Update: 2018-06-14 14:18 GMT

ಬೆಂಗಳೂರು, ಜೂ. 14: ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿದೆ ಹಾಗೂ ಏಕ ಶಿಕ್ಷಕರಿದ್ದಾರೆ ಎಂಬ ನೆಪವೊಡ್ಡಿ ಸಾವಿರಾರು ಸರಕಾರಿ ಶಾಲೆಗಳನ್ನು ಸಮೀಪದ ಶಾಲೆಗಳೊಂದಿಗೆ ವಿಲೀನ ಮಾಡಲು ಮುಂದಾಗಿರುವ ಸರಕಾರದ ಕ್ರಮವನ್ನು ಕರ್ನಾಟಕ ನವ ಜಾಗೃತಿ ವೇದಿಕೆ ತೀವ್ರವಾಗಿ ಖಂಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಅನಂತರಾಯಪ್ಪ, ರಾಜ್ಯಾದ್ಯಂತ 3450 ಸರಕಾರಿ ಪ್ರಾಥಮಿಕ ಶಾಲೆಗಳನ್ನು ಸೌಲಭ್ಯದ ಕೊರತೆ ಕಾರಣದಿಂದಾಗಿ ಬೇರೆ ಶಾಲೆಗಳೊಂದಿಗೆ ವಿಲೀನ ಮಾಡಲಾಗುತ್ತಿದೆ ಎಂದು ಸರಕಾರ ಹೇಳಿರುವುದು ಸರಿಯಲ್ಲ. ಮಕ್ಕಳನ್ನು ಬೇರೆ ಶಾಲೆಗೆ ಸ್ಥಳಾಂತರ ಮಾಡುವುದು ಒಂದೇ ಶಾಲೆಯನ್ನು ಮುಚ್ಚುವುದು ಒಂದೇ ಎಂದು ಹೇಳಿದರು.

ಅಗತ್ಯವಿರುವಷ್ಟು ಶಿಕ್ಷಕರನ್ನು ನೇಮಕ ಮಾಡುವುದು ಹಾಗೂ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಅಧಿಕಾರದಲ್ಲಿರುವವರ ಜವಾಬ್ದಾರಿಯಾಗಿದೆ. ಆದರೆ, ಆಡಳಿತ ನಡೆಸಿದವರು ಸರಿಯಾದ ಸೌಲಭ್ಯಗಳು ಕಲ್ಪಿಸದೆ, ಬಡ, ದಲಿತ, ಹಿಂದುಳಿದ ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ ಎಂದು ದೂರಿದರು.

ಈ ವರ್ಷ ಮಕ್ಕಳನ್ನು ಬೇರೆ ಶಾಲೆಗಳಿಗೆ ಸ್ಥಳಾಂತರ ಮಾಡಲಾಗುತ್ತದೆ. ಆದರೆ, ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ 3450 ಹಳ್ಳಿಗಳಲ್ಲಿನ ಬಡ ಮಕ್ಕಳು ಶಿಕ್ಷಣ ಪಡೆಯಲು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ ಅವರು, 3-4 ಕಿ.ಮೀ.ಗಳಷ್ಟು ದಿನನಿತ್ಯ ಮಕ್ಕಳು ಶಿಕ್ಷಣ ಪಡೆಯಲು ಹೋಗಬೇಕಾಗುತ್ತದೆ. ಅಲ್ಲದೆ, ಪ್ರತಿದಿನ ಕೂಲಿ ಮಾಡಿಕೊಂಡು ಜೀವನ ಮಾಡುವ ಪೋಷಕರು ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಸಾಧ್ಯವಾಗುತ್ತದಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ವಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ಪ್ರತಿ ಮಗುವಿಗೆ ತಿಂಗಳಿಗೆ 700 ರೂ.ಗಳಷ್ಟು ಪ್ರಯಾಣ ಭತ್ತೆ ನೀಡಲಾಗುತ್ತದೆ ಎಂದು ಸರಕಾರ ಹೇಳುತ್ತಿದೆ. ಒಂದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ತರಗತಿಗೆ 10 ಮಕ್ಕಳಂತೆ 1-4 ನೆ ತರಗತಿ ವರೆಗೂ 40 ಮಕ್ಕಳನ್ನು ಕರೆದೊಯ್ಯಲು 28 ಸಾವಿರ ರೂ.ಗಳನ್ನು ಖರ್ಚು ಮಾಡಲು ಸರಕಾರ ತಯಾರಿದೆ. ಆದರೆ, ಇಷ್ಟು ಹಣದಿಂದ 2-3 ಶಿಕ್ಷಕರನ್ನು ನೇಮಕ ಮಾಡಿಕೊಂಡು ಸ್ಥಳೀಯವಾಗಿ ಶಾಲೆ ನಡೆಸಲು ಸಾಧ್ಯವಿಲ್ಲವಾ ಎಂದು ಪ್ರಶ್ನಿಸಿದರು.

ಖಾಸಗಿ ಶಿಕ್ಷಣ ಮಾಫಿಯಾದ ಕೈವಾಡ ಇದರ ಹಿಂದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೆ, ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ಹಾಗೂ ಶಿಕ್ಷಕರು ಖಾಸಗಿಯವರೊಂದಿಗೆ ಶಾಮೀಲಾಗಿ ಸರಕಾರಿ ಶಾಲೆಗಳನ್ನು ದುರ್ಬಲಗೊಳಿಸಿ ಖಾಸಗಿ ಶಾಲೆಗಳಿಗೆ ಅನುವು ಮಾಡಿಕೊಡಲು ಮುಂದಾಗಿದ್ದಾರೆ. ಆದುದರಿಂದಾಗಿ, ರಾಜ್ಯ ಸರಕಾರ ಕೂಡಲೇ ವಿಲೀನ ಮಾಡುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News