ಮೂರ್ನಾಲ್ಕು ತಿಂಗಳಲ್ಲಿ ಮಲೇಶ್ಯಾ ಮರಳು ಹಂಚಿಕೆ: ಸಚಿವ ರಾಜಶೇಖರ ಬಿ.ಪಾಟೀಲ

Update: 2018-06-14 14:24 GMT

ಬೆಂಗಳೂರು, ಜೂ.14: ಮಲೇಶ್ಯಾದ ಮರಳು ರಾಜ್ಯಕ್ಕೆ ಬಂದಿದ್ದು, ಮೂರು ನಾಲ್ಕು ತಿಂಗಳಲ್ಲಿ ಹಂಚಿಕೆ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಸಚಿವ ರಾಜಶೇಖರ ಬಿ.ಪಾಟೀಲ ತಿಳಿಸಿದರು.

ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೇಶ್ಯಾದಿಂದ ರಾಜ್ಯಕ್ಕೆ ನಾಲ್ಕು ಹಡಗುಗಳಲ್ಲಿ ಮರಳು ಬಂದಿದೆ. ಮೂರು ಹಡಗು ಮಂಗಳೂರು ಬಂದರು ಹಾಗೂ ಒಂದು ಹಡಗು ಆಂಧ್ರಪ್ರದೇಶದ ಬಂದರಿಗೆ ಬಂದಿದೆ. ಈ ಮರಳು ಹಂಚಿಕೆಗೆ ಆಯ್ದ ವ್ಯಕ್ತಿಗಳಿಗೆ ಪರವಾನಿಗೆಯನ್ನು ಕೊಡಲಾಗುತ್ತಿದ್ದು, ಶೀಘ್ರದಲ್ಲೇ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ನದಿ ತೀರದ ಪ್ರದೇಶಗಳಲ್ಲಿ ಮರಳು ಗಣಿಗಾರಿಕೆಗೆ ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಪರಿಸರಕ್ಕೆ ಮಾರಕವಾಗುವ ಹಾಗೂ ಅವೈಜ್ಞಾನಿಕವಾಗಿ ಮರಳು ಗಣಿಗಾರಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಸಿಆರ್‌ಝಡ್ ಪ್ರದೇಶದಲ್ಲಿ 61ಮರಳು ದಿಬ್ಬಗಳನ್ನು ತೆರವುಗೊಳಿಸಲು ಮತ್ತು ಇದರಿಂದ ಬರುವ ಮರಳನ್ನು ಕಾಮಗಾರಿಗಳಿಗೆ ಉಪಯೋಗಿಸಿಕೊಳ್ಳಲು 390 ಸಾಂಪ್ರದಾಯಿಕ ಮರಳು ತೆಗೆಯುವ ವ್ಯಕ್ತಿಗಳಿಗೆ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 30 ಎಂಎಂಟಿ(ಮಿಲಿಯನ್ ಮೆಟ್ರಿಕ್ ಟನ್) ಮರಳಿನ ಬೇಡಿಕೆ ಇದ್ದು, ಹಾಲಿ 3.5 ಎಂಎಂಟಿ ನದಿ ಮರಳು ಮತ್ತು 23 ಎಂಎಂಟಿ ಎಂ-ಸ್ಯಾಂಡ್ ಮರಳು ಲಭ್ಯವಿದೆ. ಇದರ ಜೊತೆಗೆ ಹೊರ ದೇಶಗಳಿಂದಲೂ ಮರಳನ್ನು ಆಮದು ಮಾಡಿಕೊಳ್ಳಲು ವಿವಿಧ ಕಂಪೆನಿ-ಸಂಸ್ಥೆಗಳಿಗೆ ಅನುಮತಿಯನ್ನು ನೀಡಿ ಉತ್ತೇಜಿಸಲಾಗುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News