ಭಡ್ತಿ ವಿಚಾರದಲ್ಲಿ ಎಸ್ಸಿ-ಎಸ್ಟಿ ನೌಕರರಿಗೆ ಪಾಲಿಕೆಯ ಜೇಷ್ಠತಾ ಪಟ್ಟಿಯಲ್ಲಿ ಅನ್ಯಾಯ: ಆರೋಪ

Update: 2018-06-14 14:27 GMT

ಬೆಂಗಳೂರು, ಜೂ.14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಭಡ್ತಿ ವಿಚಾರದಲ್ಲಿ ಅವೈಜ್ಞಾನಿಕ ಜೇಷ್ಠತಾ ಪಟ್ಟಿ ತಯಾರಿಸಿದ್ದು, ಇದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಅನ್ಯಾಯವಾಗಿದೆ ಎಂದು ಪಾಲಿಕೆ ಎಸ್ಸಿ-ಎಸ್ಟಿ ಅಧಿಕಾರಿ ಮತ್ತು ನೌಕರರ ಕೇಂದ್ರ ಮಹಾ ಒಕ್ಕೂಟ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟ ಅಧ್ಯಕ್ಷ ಪಿ.ಪ್ರಸನ್ನಕುಮಾರ್, ಬಿಬಿಎಂಪಿ ಇತ್ತೀಚಿಗೆ ಪ್ರಕಟಿಸಿದ ಜೇಷ್ಠತಾ ಆಧಾರದ ಮೇಲೆ ಭಡ್ತಿ ಪಡೆಯಲು ಅರ್ಹರಿರುವ ಪಟ್ಟಿಯಲ್ಲಿ ಸಾಮಾನ್ಯ ವರ್ಗದವರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜಾತಿಯವರನ್ನು ಸಾಮಾನ್ಯ ವರ್ಗದವರು ಎಂದು ನಮೂದಿಸಲಾಗಿದೆ. ಅಲ್ಲದೆ, 10 ವರ್ಷದ ಹಿಂದೆ ಮರಣ ಹೊಂದಿದವರ ಹೆಸರನ್ನು ಮುಂಭಡ್ತಿಗೆ ಪರಿಗಣಿಸಲಾಗಿದೆ. ಪಾಲಿಕೆಯು ರೋಸ್ಟರ್ ಪದ್ಧತಿಯನ್ನು ಅನುಸರಿಸಿಲ್ಲ ಎಂದು ದೂರಿದರು.

ಪಾಲಿಕೆ ನೀಡಿರುವ ಸೇವಾ ಜೇಷ್ಠತಾ ಪಟ್ಟಿಯಲ್ಲಿ ಜನ್ಮದಿನಾಂಕ, ಸೇವೆಗೆ ಸೇರಿದ ದಿನಾಂಕ ಮತ್ತು ಮುಂಭಡ್ತಿ ದಿನಾಂಕಗಳು ದೋಷಪೂರಿತವಾಗಿದೆ. ಅಲ್ಲದೆ, ನೇರ ನೇಮಕಾತಿ ಹೊಂದಿದ ನೌಕರರನ್ನು ಮುಂಭಡ್ತಿ ರಿಕ್ತ ಸ್ಥಾನಕ್ಕೆ ಹಾಗೂ ಮುಂಭಡ್ತಿ ಹೊಂದಿದ ನೌಕರರನ್ನು ನೇಮಕಾತಿ ರಿಕ್ತ ಸ್ಥಾನಕ್ಕೆ ಪರಿಗಣಿಸಿರುವುದು ಕಂಡು ಬಂದಿದೆ ಎಂದು ಅವರು ತಿಳಿಸಿದರು.

ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸುವ ಸಂದರ್ಭದಲ್ಲಿ ಪ್ರತಿಯೊಬ್ಬ ನೌಕರರ ನೇಮಕಾತಿ ದಿನಾಂಕ, ಪರೀಕ್ಷಾರ್ಥ ಸೇವಾ ಅವಧಿ, ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಅವಧಿ ಮತ್ತು ದಿನಾಂಕ, ವೃಂದ ಮತ್ತು ನೇಮಕಾತಿ ಅನ್ವಯ ಅರ್ಹತಾದಾಯಕ ಸೇವೆ, ಖಾಲಿಯಿರುವ ಹುದ್ದೆಗಳ ಸಂಖ್ಯೆ ಮತ್ತು ಮೀಸಲಾತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಮುಂಭಡ್ತಿ ಹುದ್ದೆಗಳಿಗೆ ಅರ್ಹತಾ ದಿನಾಂದ ನಿಗದಿ ಮಾಡಿ ಎಲ್ಲ ವೃಂದದ ಸೇವಾ ಜೇಷ್ಠತಾ ಪಟ್ಟಿ ಅಂತಿಮವಾಗಿ ಪ್ರಕಟಿಸಬೇಕು. ಆದರೆ, ಇದ್ಯಾವುದನ್ನೂ ಇಲ್ಲಿ ಪರಿಗಣಿಸಿಲ್ಲ ಎಂದು ಅವರು ಹೇಳಿದರು.

ಬಿಬಿಎಂಪಿ ಕ್ರಮ ಖಂಡಿಸಿ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಹೀಗಾಗಿ, ನಮ್ಮ ಬೇಡಿಕೆಗಳನ್ನೊಳಗೊಂಡು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರಕಾರದ ಗಮನ ಸೆಳೆಯಲು ರಾಜ್ಯ ಸರಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರು ಜೂ.15 ರಂದು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ರ್ಯಾಲಿಗೆ ಬೆಂಬಲ ನೀಡಿ ಪಾಲಿಕೆ ಎಲ್ಲ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News