ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಜಗಳ; ಇಬ್ಬರ ಕೊಲೆಯಲ್ಲಿ ಅಂತ್ಯ

Update: 2018-06-14 14:43 GMT

ಬೆಂಗಳೂರು, ಜೂ.14: ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದು, ಇಬ್ಬರು ಸಹೋದರರ ಕೊಲೆಯಲ್ಲಿ ಅಂತ್ಯವಾಗಿರುವ ದುರ್ಘಟನೆ ಇಲ್ಲಿನ ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಗೋವಿಂದಪುರದ ನಿವಾಸಿಗಳಾದ ಮತೀನ್(32) ಮತ್ತು ಅಮೀನ್(30) ಕೊಲೆಯಾದ ಸಹೋದರರಾಗಿದ್ದು, ವೃತ್ತಿಯಲ್ಲಿ ಮೆಕ್ಯಾನಿಕ್‌ಗಳಾಗಿದ್ದರು. ಕೆಜಿ ಹಳ್ಳಿ ಠಾಣೆಯ ರೌಡಿ ಪಟ್ಟಿಯಲ್ಲಿ ಅಮೀನ್ ಹೆಸರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಗೋವಿಂದಪುರದ ಈರಣ್ಣನಪಾಳ್ಯ ಮುಖ್ಯರಸ್ತೆಯಲ್ಲಿ ಆಲಿ ಎಂಬುವವರಿಗೆ ಸೇರಿದ ಚಿಕ್ಕ ಅಂಗಡಿ ಬಳಿ ಬುಧವಾರ ರಾತ್ರಿ 9 ಗಂಟೆ ಸಮಯದಲ್ಲಿ ಅಮೀನ್ ಅಂಗಡಿಗೆ ಹೋಗಿ ಸಿಗರೇಟ್ ತೆಗೆದುಕೊಂಡಿದ್ದಾನೆ. ಈ ವೇಳೆ ಮಾಲಕ ಆಲಿ ಹಣ ಕೇಳಿದಾಗ ಹಣ ಇಲ್ಲ, ಆಮೇಲೆ ಕೊಡುತ್ತೇನೆ ಎಂದು ಅಮೀನ್ ಹೇಳಿದ ಎನ್ನಲಾಗಿದೆ.

ಈ ವೇಳೆ ಇವರಿಬ್ಬರ ನಡುವೆ ಜಗಳವಾಗಿ ಅಮೀನ್, ಆಲಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಕೋಪಗೊಂಡ ಆಲಿ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಆರೇಳು ಮಂದಿಯ ಗುಂಪು ಅಮೀನ್‌ಗೆ ಥಳಿಸಿದೆ ಎನ್ನಲಾಗಿದೆ.

ಬಳಿಕ ಅಮೀನ್ ಅಣ್ಣ ಮತೀನ್ ಸ್ಥಳಕ್ಕೆ ಬಂದು ಜಗಳ ಬಿಡಿಸುವ ವೇಳೆ ಗುಂಪು ಈತನ ಮೇಲೆಯೂ ವುನಬಂದಂತೆ ಥಳಿಸಿ ಪರಾರಿಯಾಗಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಸಹೋದರರ ಪೈಕಿ ಮತೀನ್‌ನನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರೆ, ಇತ್ತ ನಿಮ್ಹಾನ್ಸ್‌ಗೆ ದಾಖಲಾಗಿದ್ದ ಅಮೀನ್ ಸಹ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಕೆಜಿ ಹಳ್ಳಿ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಮೂವರ ಬಂಧನ: ಪ್ರಕರಣ ದಾಖಲಿಸಿಕೊಂಡಿರುವ ಕೆಜಿ ಹಳ್ಳಿ ಠಾಣೆ ಪೊಲೀಸರು ಜೋಡಿ ಕೊಲೆ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ದೊಣ್ಣೆಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಬಂದೋಬಸ್ತ್: ಜೋಡಿ ಕೊಲೆ ನಡೆದ ಗೋವಿಂದಪುರ, ಕೆಜಿ ಹಳ್ಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News