ಬಿಎಂಟಿಸಿ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ವಿತರಣೆ

Update: 2018-06-14 14:55 GMT

ಬೆಂಗಳೂರು, ಜೂ. 14: ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ವತಿಯಿಂದ ರಿಯಾಯಿತಿ ಬಸ್ ಪಾಸ್ ವಿತರಣೆ ಆರಂಭಿಸಲಾಗಿದೆ.

ಪೂರ್ವ ಮುದ್ರಿತ ಪಾಸುಗಳನ್ನು ಪಡೆಯಲು ವಿದ್ಯಾರ್ಥಿಗಳು ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ ಪಾಸಿನ ಅರ್ಜಿಯನ್ನು ಪಡೆದು, ಭರ್ತಿ ಮಾಡಿ, ಶಾಲೆಯಲ್ಲಿ ದೃಢೀಕರಿಸಿದ ಅರ್ಜಿಯೊಂದಿಗೆ ಶಾಲಾ/ಕಾಲೇಜಿನ ಶುಲ್ಕ ರಸೀದಿ, ಆಧಾರ್ ಕಾರ್ಡ್/ವಾಸಸ್ಥಳ ದೃಢೀಕರಣ, ಗುರುತಿನ ಚೀಟಿ, ನಿಗದಿತ ಶುಲ್ಕ ಹಾಗೂ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು.

ಸರದಿ ಸಾಲಿನ ಅಗತ್ಯ ಇಲ್ಲ: ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಲ್ಲಬೇಕಾದ ತೊಂದರೆ ತಪ್ಪಿಸಲು 2018-19ನೆ ಶೈಕ್ಷಣಿಕ ಸಾಲಿನಿಂದ ಸ್ಮಾರ್ಟ್‌ಕಾರ್ಡ್ ಮಾದರಿಯಲ್ಲಿ ಶಾಲೆಯ ಮೂಲಕ ಪಾಸ್ ವಿತರಣೆ ಮಾಡಲಾಗುತ್ತಿದೆ. ಸ್ಮಾರ್ಟ್‌ಕಾರ್ಡ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಶಾಲೆಗೆ ದಾಖಲಾದ ನಂತರ ಪಾಸನ್ನು ಪಡೆಯುವ ಬಗ್ಗೆ ಶಾಲೆಯಲ್ಲಿ ತಿಳಿಸುವುದು.

ಶಾಲೆಯ ನೋಡಲ್ ಅಧಿಕಾರಿಯು ಶಿಕ್ಷಣ ಇಲಾಖೆಯ SATS(Student Achivement Tracking System)/ PU online Portal ಅಪ್ಲಿಕೇಷನ್‌ನಲ್ಲಿ ವಿದ್ಯಾರ್ಥಿ ಪಾಸಿಗಾಗಿ ಅರ್ಜಿ ಸಲ್ಲಿಸುವುದು ಹಾಗೂ ಸೇವಾ ಶುಲ್ಕವನ್ನು ಸಂಗ್ರಹಿಸಬೇಕು.

ಒಂದರಿಂದ ಏಳನೆ ತರಗತಿಯ ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಲು ಪಾಸಿನ ಮೊತ್ತ 150 ರೂ.ಗಳನ್ನು ಪಾವತಿಸುವುದು. 8ರಿಂದ 10ನೆ ತರಗತಿಯ ವರೆಗಿನ ವಿದ್ಯಾರ್ಥಿಗಳು ನಿಗದಿತ ಪಾಸಿನ ಮೊತ್ತ ಪಾವತಿಸಬೇಕು. ಪಿಯುಸಿ ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಲು ಇಚ್ಛಿಸಿದ್ದಲ್ಲಿ ಕಾಲೇಜಿನಲ್ಲಿ ತಿಳಿಸುವುದು ಹಾಗೂ ಪಾಸಿನ ಮೊತ್ತವನ್ನು ಕಾಲೇಜಿನಲ್ಲಿ ಪಾವತಿಸುವುದು.

ನೋಡಲ್ ಅಧಿಕಾರಿ ಪಾತ್ರ: ಪಾಸನ್ನು ಪಡೆಯಲು ಇಚ್ಛಿಸಿದ ವಿದ್ಯಾರ್ಥಿಗಳ ಅರ್ಜಿಯನ್ನು ಶಿಕ್ಷಣ ಇಲಾಖೆಯ SATS(Student Achivement Tracking System)/ PU online Portal SATS ಅಪ್ಲಿಕೇಷನ್‌ನಲ್ಲಿ ವಿದ್ಯಾರ್ಥಿ ಪಾಸಿಗಾಗಿ ಅರ್ಜಿ ಸಲ್ಲಿಸುವುದು. ಅರ್ಜಿ ಸಲ್ಲಿಸುವ ವಿಧಾನವು ಅಪ್ಲಿಕೇಷನ್‌ನ ಮುಖಪುಟದಲ್ಲಿ ಲಭ್ಯವಿರುತ್ತದೆ.

ಬಿಎಂಟಿಸಿ SATS(Student Achivement Tracking System)/ PU online Portal ಅಪ್ಲಿಕೇಷನ್‌ನಲ್ಲಿ ಅರ್ಜಿಯನ್ನು ಸ್ವೀಕರಿಸಿದ ನಂತರ ಸಂಸ್ಥೆಯು ಸ್ಮಾರ್ಟ್‌ಕಾರ್ಡ್ ಮಾದರಿಯ ಪಾಸನ್ನು ಮುದ್ರಣಗೊಳಿಸುತ್ತದೆ. ಒಂದರಿಂದ 7ನೆ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಸ್ಮಾರ್ಟ್‌ಕಾರ್ಡ್ ಮಾದರಿಯ ಪಾಸುಗಳನ್ನು ಸಂಸ್ಥೆಯ ಮೂಲಕ ಶಾಲೆಗೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಪಾಸನ್ನು ಅಂಚೆ ಮೂಲಕ ವಾಸಸ್ಥಳ ವಿಳಾಸಕ್ಕೆ ರವಾನಿಸಲಾಗುವುದು.

ಪಾಸಿನ ಶುಲ್ಕ: ಪ್ರೌಢಶಾಲೆ(ಬಾಲಕಿಯರು)-600 ರೂ., ಎಸ್ಸಿ-ಎಸ್ಟಿಗಳಿಗೆ ಉಚಿತ (200 ರೂ.ಸಂಸ್ಕರಣಾ ಶುಲ್ಕ), ಪ್ರೌಢಶಾಲೆ(ಬಾಲಕರು)-800 ರೂ, ಪಿಯುಸಿ ವಿದ್ಯಾರ್ಥಿಗಳು-1,100 ರೂ., ಪಿಯುಸಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ (200 ರೂ.ಸಂಸ್ಕರಣಾ ಶುಲ್ಕ) ಪಾವತಿಸಬೇಕು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News