ಗೌರಿ ಹತ್ಯೆ ಹಿಂದಿನ ಶಕ್ತಿ ಬಹಿರಂಗಗೊಳ್ಳಲಿ: ಪಾಪ್ಯುಲರ್ ಫ್ರಂಟ್‌

Update: 2018-06-14 15:07 GMT

ಬೆಂಗಳೂರು, ಜೂ. 14: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ಕೇಸರಿ ಸಂಘಟನೆಯೊಂದರ ಸಕ್ರಿಯ ಕಾರ್ಯಕರ್ತ ಪರಶುರಾಮ್ ವಾಗ್ಮೋರೆ ಎಂಬಾತನನ್ನು ಬಂಧಿಸಿದ್ದು, ಸಂಚಿನ ಹಿಂದಿನ ಎಲ್ಲಾ ಷಡ್ಯಂತ್ರಗಳನ್ನು ಕೂಡಲೇ ಬಯಲಿಗೆಳೆಯಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಆಗ್ರಹಿಸಿದ್ದಾರೆ.

ಇದೀಗ ಸಂಘಪರಿವಾರದ ಕಾರ್ಯಕರ್ತರೆನ್ನಲಾದ ಇಬ್ಬರು ಯುವಕರ ಮೇಲೆ ಪೊಲೀಸರು ಜಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಹಿರಿಯ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿಯವರ ಹತ್ಯೆಯ ಪ್ರಕರಣವನ್ನು ಇದುವರೆಗೆ ಭೇದಿಸಲಾಗದಿರುವುದು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಕಲ್ಬುರ್ಗಿಯವರ ಹತ್ಯೆಯ ತನಿಖೆ ಹಳ್ಳ ಹಿಡಿದ ಕಾರಣದಿಂದಲೇ ಕೊಲೆಗಡುಕರಿಗೆ ಗೌರಿಯವರ ಹತ್ಯೆ ನಡೆಯಲು ಪ್ರೇರಣೆಯಾಯಿತೇ ಎಂದು ಅನುಮಾನ ಪಡುವಂತಾಗಿದೆ. ಗೌರಿ ಹತ್ಯೆಯಲ್ಲಿ ಕೇಸರಿ ಸಂಘಟನೆಗಳ ಕೈವಾಡ ಕಾಣಿಸುತ್ತಿದೆ. ಕಲ್ಬುರ್ಗಿಯವರ ಹತ್ಯೆಯಲ್ಲೂ ಸಂಘಪರಿವಾರದ ಸನಾತನ ಸಂಸ್ಥೆಯ ಹೆಸರು ಕೇಳಿಬಂದಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಂಘಪರಿವಾರದ ಕಾರ್ಯಕರ್ತರ ಮೇಲಿನ ಗಂಭೀರ ಪ್ರಕರಣಗಳು ಒಂದೊಂದಾಗಿ ಕೈಬಿಟ್ಟು ಹೋಗುತ್ತಿರುವ ಸನ್ನಿವೇಶಕ್ಕೆ ದೇಶವು ಸಾಕ್ಷಿಯಾಗುತ್ತಿದೆ. ಗೌರಿ ಲಂಕೇಶ್ ಮತ್ತು ಕಲ್ಬುರ್ಗಿಯವರ ಹತ್ಯೆ ಪ್ರಕರಣದಲ್ಲಿ ಸಾಮ್ಯತೆಗಳು ಕಂಡು ಬಂದಿವೆ ಎಂದು ಅವರು ತಿಳಿಸಿದರು.

ಇದೀಗ ಬಂಧಿತನಾಗಿರುವ ಪರಶುರಾಂ ಹಿಂದುತ್ವ ಸಂಘಟನೆಯೊಂದರ ಸದಸ್ಯನಾಗಿರುತ್ತಾನೆ. ಈ ಮಧ್ಯೆ ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ನೀಲಕಂಠ ಕಂದಗಲ್ ಪರಶುರಾಂ ವಾಗ್ಮೋರೆಯನ್ನು ಬೆಂಬಲಿಸಿ ಫೇಸ್ ಬುಕ್‌ನಲ್ಲಿ ಪೋಸ್ಟ್ ಹಾಕಿದ್ದು ವಾಗ್ಮೋರೆ ನೀಲಕಂಠ ನಡುವಿನ ನಂಟನ್ನು ಬಹಿರಂಗಗೊಳಿಸಿದೆ. ಮಾತ್ರವಲ್ಲ ಆರೋಪಿಗಳು ಕೆ.ಎಸ್‌.ಭಗವಾನ್ ಹತ್ಯೆಗೂ ಸಂಚು ರೂಪಿಸಿದ್ದು ಎನ್ನುವ ಮಾತುಗಳು ಕೇಳಿಬರುತ್ತಿದೆ. ಅದರೊಂದಿಗೆ ಗಿರೀಶ್ ಕಾರ್ನಾಡ್ , ಬಿ.ಟಿ ಲಲಿತ ನಾಯಕ್, ನಿಡುಮಾಮಿಡಿ ಶ್ರೀ, ವೀರಭದ್ರ ಚನ್ನಮಲ್ಲ ಸ್ವಾಮಿ ಮತ್ತು ದ್ವಾರಕಾನಾಥ್ ಅವರ ಹೆಸರುಗಳೂ ಹಿಟ್ ಲಿಸ್ಟಿನಲ್ಲಿದೆ ಎಂದು ಸಿಟ್ ತನಿಖಾ ತಂಡದ ಮೂಲಗಳು ತಿಳಿಸಿವೆ. ಆರೋಪಿಗಳು ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಭಾರೀ ರಕ್ತಪಾತವನ್ನು ಮಾಡಲು ಸಂಚು ರೂಪಿಸಿದ್ದು ವ್ಯಕ್ತವಾಗುತ್ತಿದೆ. ಆದ್ದರಿಂದ ಸರಕಾರ ಯಾವುದೇ ರೀತಿಯ ಭಾಹ್ಯ ಶಕ್ತಿಗಳ ಒತ್ತಡ ಬೀಳದಂತೆ ಸುಸೂತ್ರವಾಗಿ ಕಾರ್ಯ ನಿರ್ವಹಿಸಲು ತನಿಖಾ ತಂಡಕ್ಕೆ ಅನುವು ಮಾಡಿಕೊಡಬೇಕು ಮತ್ತು ಗೌರಿ ಹತ್ಯೆಯ ಹಿಂದಿರುವ ಉಗ್ರವಾದಿ ದೇಶದ್ರೋಹಿ ಸಂಘಟನೆಗಳ ಅಸಲೀ ಮುಖವನ್ನು ಬಹಿರಂಗಗೊಳಿಸಬೇಕೆಂದು ಯಾಸರ್ ಹಸನ್ ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News