ನ್ಯಾಯಾಧೀಶರು ತಾರತಮ್ಯ ಮಾಡದೆ ತೀರ್ಪನ್ನು ನೀಡಬೇಕು: ಸುಪ್ರೀಂಕೋರ್ಟ್‌ ನ್ಯಾ.ಅಬ್ದುಲ್ ನಜೀರ್

Update: 2018-06-14 16:15 GMT

ಬೆಂಗಳೂರು, ಜೂ.14: ನೂತನ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿರುವ ಎಲ್ಲರೂ ಯಾವುದೇ ತಾರತಮ್ಯ ಮಾಡದೆ ತೀರ್ಪನ್ನು ನೀಡಬೇಕು ಹಾಗೂ ಅತೀ ಬುದ್ಧಿವಂತಿಕೆಯನ್ನು ಪ್ರದರ್ಶಿಸಿ ತೀರ್ಪನ್ನು ನೀಡಲು ಹೋಗಬಾರದು ಎಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಕಿವಿ ಮಾತು ಹೇಳಿದ್ದಾರೆ.

ಗುರುವಾರ ಸಿಟಿ ಸಿವಿಲ್ ಕೋರ್ಟ್ ಆವರಣದ ವಕೀಲರ ಭವನದಲ್ಲಿ ಬೆಂಗಳೂರು ವಕೀಲರ ಅಕಾಡಮಿ, ಬೆಂಗಳೂರು ವಕೀಲರ ಸಂಘ ಜಂಟಿಯಾಗಿ ಆಯೋಜಿಸಿದ್ದ ಜಿಲ್ಲಾ ನ್ಯಾಯಾಧೀಶರಾಗಿ ನೇಮಕವಾದ ವಕೀಲರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನೂತನ ಜಿಲ್ಲಾ ನ್ಯಾಯಾಧೀಶರಾಗಿ ನೇಮಕವಾಗಿರುವ ಎಲ್ಲರೂ ವಕೀಲರ ವಾದವನ್ನು ತಾಳ್ಮೆಯಿಂದ ಆಲಿಸಿದರೆ ತೀರ್ಪನ್ನು ಯಾರಿಗೂ ಅನ್ಯಾಯವಾಗದ ರೀತಿಯಲ್ಲಿಯೇ ನೀಡುತ್ತಿರಿ. ಇದರಿಂದ, ವೃತ್ತಿಯಲ್ಲಿ ನೀವು ಬೆಳೆಯುತ್ತಿರಿ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೂಡ ಸಿಗುತ್ತದೆ ಎಂದು ಹೇಳಿದರು.

ಸಮಾಜದಲ್ಲಿನ ಅಸ್ಥಿರತೆ, ಅಶಾಂತಿಯನ್ನು ಹೋಗಲಾಡಿಸಲು ನ್ಯಾಯಾಧೀಶರಾಗಿ ನೇಮಕವಾಗಿರುವ ನೀವೆಲ್ಲರೂ ಪರಿಶ್ರಮದಿಂದ ಹಾಗೂ ಶಿಸ್ತಿನಿಂದ ಕೆಲಸ ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಸಾಗುತ್ತೀರಿ ಎಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಮಾತನಾಡಿ, ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಹಾಗೂ ವೆಂಕಟಾಚಲಯ್ಯ ಅವರು ನಾನು ಕಂಡ ಹಾಗೇ ತಾಳ್ಮೆಯಿಂದ ವಕೀಲರ ವಾದವನ್ನು ಆಲಿಸಿ ತೀರ್ಪುನ್ನು ನೀಡುತ್ತಿದ್ದರು. ಅದೇ ರೀತಿಯಾಗಿ ಪರಿಶ್ರಮವನ್ನು ತಮ್ಮಲ್ಲಿ ಮೈಗೂಡಿಸಿಕೊಂಡಿದ್ದರು ಎಂದು ಹೇಳಿದರು. ಈ ಇಬ್ಬರು ನ್ಯಾಯಮೂರ್ತಿಗಳನ್ನು ನಾವೆಲ್ಲರೂ ಮಾಡೆಲ್ ಆಗಿ ತೆಗೆದುಕೊಂಡು ಮುಂದೆ ಸಾಗೋಣ ಎಂದು ಸಲಹೆ ನೀಡಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ವಕೀಲರ ಅಕಾಡಮಿ ನಡೆಸುವ ತರಬೇತಿಯಿಂದ 7 ಜನ ವಕೀಲರು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ, ಯುವ ವಕೀಲರೂ ಇದರ ಸದುಪಯೋಗವನ್ನು ಪಡೆದುಕೊಂಡು ನ್ಯಾಯಾಧೀಶರಾಗಿ ನೇಮಕವಾಗಬೇಕೆಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಕೀಲರ ಅಕಾಡಮಿ ಖಜಾಂಚಿ ಡಿ.ಎನ್.ನಂಜುಂಡರೆಡ್ಡಿ, ನಿರ್ದೇಶಕ ಗೌರಿಶಂಕರ್, ವಕೀಲರ ಸಂಘದ ಖಜಾಂಚಿ ಶಿವಮೂರ್ತಿ, ಎ.ಎನ್.ಗಂಗಾಧರಯ್ಯ, ಎಲ್.ಎಸ್.ವೆಂಕ ಟೇಶ್‌ಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News