ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣದಲ್ಲಿ ಸಮರ್ಪಕ ತನಿಖೆ ನಡೆದಿಲ್ಲ: ಹೈಕೋರ್ಟ್ ಗರಂ

Update: 2018-06-14 16:17 GMT

ಬೆಂಗಳೂರು, ಜೂ.14: ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣದಲ್ಲಿ ಸಮರ್ಪಕ ತನಿಖೆ ನಡೆಸದ ಮಹಿಳಾ ಠಾಣೆಯ ಪೊಲೀಸರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ದೋಷಾರೋಪಪಟ್ಟಿ ಸಲ್ಲಿಸಿದ್ದ ದಾವಣಗೆರೆಯ ಮಹಿಳಾ ಠಾಣಾ ಪೊಲೀಸರು, ಯಾರು ಯಾರಿಗೆ ಬಾಡಿಗೆ ನೀಡಿದ್ದಾರೆ? ಬಾಡಿಗೆ ಕರಾರು ಪತ್ರ ಎಲ್ಲಿದೆ? ವೇಶ್ಯಾವಾಟಿಕೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಯಾರು? ಗಿರಾಕಿಗಳ್ಯಾರು? ಎಂಬುದರ ಕುರಿತು ಮಾಹಿತಿಯನ್ನು ಒದಗಿಸಿರಲಿಲ್ಲ. ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಹೇಳಿ ಕೇಸು ದಾಖಲಿಸಿದರೆ ಸಾಲದು, ವೇಶ್ಯಾವಾಟಿಕೆಯನ್ನು ನಿಯಂತ್ರಿಸುವ ಕಾನೂನುಗಳ ಅನುಸಾರ ತನಿಖೆ ನಡೆಸಬೇಕಾಗುತ್ತದೆ. ಸಮರ್ಪಕ ತನಿಖೆ ನಡೆಸಿ ಸಾಕ್ಷಾಧಾರಗಳನ್ನು ಕಲೆಹಾಕಬೇಕು. ಬೇಕಾಬಿಟ್ಟಿ ತನಿಖೆ ನಡೆಸಿದರೆ ಸಹಿಸಲಾಗದು ಎಂದು ಮಹಿಳಾ ಠಾಣಾ ಪೊಲೀಸರ ಕಾರ್ಯ ವೈಖರಿಗೆ ಚಾಟಿ ಬೀಸಿದೆ.

ಅಲ್ಲದೆ, ಮನೆಯ ಮಾಲಕರು ಯಾರು? ಯಾರಿಗೆ ಬಾಡಿಗೆ ನೀಡಲಾಗಿತ್ತು? ಬಾಡಿಗೆ ಕರಾರಿನಲ್ಲಿ ಏನಿದೆ? ವೇಶ್ಯವಾಟಿಕೆಯಲ್ಲಿ ಸಿಲುಕಿದ್ದ ಮಹಿಳೆಯರು ಯಾರು? ಗಿರಾಕಿಗಳು ಯಾರು? ಎಂದು ಪತ್ತೆ ಹಚ್ಚಬೇಕು. ಅಲ್ಲದೆ, ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ಮಹಿಳೆಯರು, ವೇಶ್ಯಾವಾಟಿಕೆ ನಡೆಸುತ್ತಿದ್ದ, ಗಿರಾಕಿಗಳು ಮತ್ತು ಸ್ವತಂತ್ರ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಬೇಕು. ಆದರೆ, ಈ ಪ್ರಕರಣದಲ್ಲಿ ಈ ಯಾರೊಬ್ಬರ ಹೇಳಿಕೆ ದಾಖಲಿಸಿಲ್ಲ. ಸ್ವತಂತ್ರ ಸಾಕ್ಷಿಗಳು ವಿವರ ಹಾಗೂ ಅವರ ಹೇಳಿಕೆಗಳನ್ನು ನಮೂದಿಸಿಲ್ಲ. ಕೇವಲ 11 ಮಂದಿ ಪೊಲೀಸ್ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಹೈಕೋರ್ಟ್ ತೀಕ್ಷ್ಣವಾಗಿ ನುಡಿದಿದೆ.

ಯಾವ ಸಾಕ್ಷಾಧಾರಗಳು ಇಲ್ಲದಿದ್ದರೂ ಹೇಗೆ ಪ್ರಕರಣವನ್ನು ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಪ್ರತಿವಾದಿಯಾಗಿರುವ ದಾವಣಗೆರೆ ಮಹಿಳಾ ಠಾಣೆ ಪೊಲೀಸರಿಂದ ವಿವರಣೆ ಪಡೆದು ಮಾಹಿತಿ ನೀಡುವಂತೆ ಸರಕಾರಿ ಅಭಿಯೋಜಕರಾಗಿರುವ ರಾಚಯ್ಯ ಅವರಿಗೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಸೂಚಿಸಿ ವಿಚಾರಣೆಯನ್ನು ಜೂನ್ 20ಕ್ಕೆ ಮುಂದೂಡಿದ್ದಾರೆ.

ಪ್ರಕರಣವೇನು: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬುದಾಗಿ ಖಚಿತಮಾಹಿತಿ ಬಂದಿದೆ ಎಂದು ಹೇಳಿ ದಾವಣಗೆರೆ ಮಹಿಳಾ ಠಾಣಾ ಪೊಲೀಸರು, 2010ರ ಅ.26ರಂದು ಸ್ಪಂದನ ಹೊಟೇಲ್ ಬಳಿಯ ಮನೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕುಬೇಂದ್ರಪ್ಪ ಎಂಬವರು ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿತ್ತು. ಕುಬೇಂದ್ರಪ್ಪರಿಂದ 200 ರೂ.ವಶಕ್ಕೆ ಪಡೆಯಲಾಗಿತ್ತು. ನಂತರ ಪ್ರಕರಣದ ತನಿಖೆ ನಡೆಸಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ತನ್ನ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಕುಬೇಂದ್ರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅನೈತಿಕ ಚಟುವಟಿಕೆಗಳ ನಿಯಂತ್ರಣ ಕಾಯ್ದೆ-1956ರ ಸೆಕ್ಷನ್ 13ರನ್ನು ಪಾಲಿಸಿಲ್ಲ. ಪ್ರಕರಣದಲ್ಲಿ ಮಹಿಳಾ ಠಾಣಾ ಸಬ್ ಇನ್ಸ್‌ಪೆಕ್ಟರ್ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೆ, ಇನ್ಸ್‌ಪೆಕ್ಟರ್ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಬೇಕಿದೆ. ತಾನು ವೇಶ್ಯಾವಾಟಿಕೆಯಲ್ಲಿ ಪಾಲ್ಗೊಂಡಿಲ್ಲ. ತನ್ನ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷಾಧಾರಗಳು ಇಲ್ಲ. ಹೀಗಾಗಿ ಪ್ರಕರಣ ರದ್ದುಪಡಿಸುವಂತೆ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News