ವಾರ್ಡ್ ಮರು ವಿಂಗಡಣೆ ಮಾಡಲಾಗುವುದು: ಹೈಕೋರ್ಟ್‌ಗೆ ಹೇಳಿಕೆ ನೀಡಿದ ಸರಕಾರ

Update: 2018-06-14 16:37 GMT

ಬೆಂಗಳೂರು, ಜೂ.14: ರಾಜ್ಯದ 217 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲು ಕಲ್ಪಿಸಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಗುರುವಾರ ಇತ್ಯರ್ಥಪಡಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಶ್ರೀನಿವಾಸೇಗೌಡ ಅವರಿದ್ದ ಪೀಠಕ್ಕೆ, ರಾಜ್ಯ ಸರಕಾರ ಹಾಗೂ ರಾಜ್ಯ ಚುನಾವಣಾ ಆಯೋಗ ಗುರುವಾರ ಜಂಟಿ ಜ್ಞಾಪನಾಪತ್ರ (ಮೆಮೊ) ಸಲ್ಲಿಸಿದವು.

116 ಸ್ಥಳಿಯ ಸಂಸ್ಥೆಗಳಿಗೆ ಜು.4ರೊಳಗೆ ಹಾಗೂ 102 ಸ್ಥಳೀಯ ಸಂಸ್ಥೆಗಳಿಗೆ ಜು.9ರೊಳಗೆ ವಾರ್ಡ್ ಮರು ವಿಂಗಡಣೆ ಮಾಡಿ ಅಧಿಸೂಚನೆ ಹೊರಡಿಸಲಾಗುವುದು. ಜು.12ರೊಳಗೆ ಮೇಯರ್, ಉಪಮೇಯರ್, ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಪಟ್ಟಿಯನ್ನು ಪ್ರಕಟಿಸಿ, ಸರಕಾರ ಅದನ್ನು ಚುನಾವಣಾ ಆಯೋಗಕ್ಕೆ ನೀಡಲಿದೆ. ಇದಕ್ಕೆ ಚುನಾವಣಾ ಆಯೋಗವೂ ಸಮ್ಮತಿಸಿದೆ ಎಂದು ಜ್ಞಾಪನಾಪತ್ರದಲ್ಲಿ ವಿವರಿಸಲಾಗಿತ್ತು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿ ಇತ್ಯರ್ಥಪಡಿಸಿತು.

ಇದಕ್ಕೂ ಮುನ್ನ ಸರಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್, ಈಗಾಗಲೇ 200ಕ್ಕೂ ಅಧಿಕ ಸ್ಥಳೀಯ ಸಂಸ್ಥೆಗಳ ವಾರ್ಡ್ ವಿಂಗಡಣೆ ಪಟ್ಟಿಯನ್ನು ಸಲ್ಲಿಸಲಾಗಿದ್ದು, ವಾರ್ಡ್‌ವಾರು ಮೀಸಲು ಪಟ್ಟಿಯನ್ನು ಸರಕಾರ ಸಿದ್ಧಪಡಿಸುತ್ತಿದೆ. ಅದನ್ನು ಶೀಘ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಚುನಾವಣಾ ಆಯೋಗದ ಪರ ವಕೀಲ ಕೆ.ಎನ್. ಫಣೀಂದ್ರ ವಾದಿಸಿ, ಈ ಹಿಂದೆಯೇ ಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದ ಅನುಸಾರ ವಾರ್ಡ್ ಮರು ವಿಂಗಡಣೆ ಮಾಡಿ ಮೀಸಲು ಪಟ್ಟಿ ಪ್ರಕಟಿಸಲು ಸರಕಾರ ವಿಲವಾಗಿದೆ. ಇದರಿಂದ ಸಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಆಯೋಗಕ್ಕೆ ಸಾಧ್ಯವಾಗುತ್ತಿಲ್ಲ ಎಂದರು.

ಇದಕ್ಕೆ ನ್ಯಾಯಪೀಠ, ಸರಕಾರಕ್ಕೂ ಕೆಲವೊಂದು ಪ್ರ್ಯಾಕ್ಟಿಕಲ್ ಸಮಸ್ಯೆಗಳಿರುತ್ತವೆ. ಅದನ್ನು ಚುನಾವಣಾ ಆಯೋಗವೂ ಅರ್ಥೈಸಿಕೊಳ್ಳಬೇಕು. ಅದೇ ರೀತಿ ಆಯೋಗಕ್ಕೂ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಇರುತ್ತದೆ. ಅದನ್ನು ಸರಕಾರ ಅರಿತುಕೊಳ್ಳಬೇಕು. ಸಾರ್ವಜನಿಕರ ಹಕ್ಕುಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಸರಕಾರ ಹಾಗೂ ಆಯೋಗ ಒಟ್ಟಾಗಿ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಅರ್ಜಿ ಇತ್ಯರ್ಥಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News