ಎಸ್‌ಐಟಿಗೆ ‘ಕಲ್ಬುರ್ಗಿ ಹತ್ಯೆ ಪ್ರಕರಣ’

Update: 2018-06-16 12:06 GMT

ಬೆಂಗಳೂರು, ಜೂ.16: ವಿಚಾರವಾದಿ ಎಂ.ಎಂ ಕಲ್ಬುರ್ಗಿ ಹತ್ಯೆಯ ಪ್ರಕರಣವನ್ನು ವಿಶೇಷ ತನಿಖಾ ತಂಡ(ಸಿಟ್)ಗೆ ನೀಡಲು ರಾಜ್ಯ ಸರಕಾರ ಮುಂದಾಗಿದ್ದು, ಮುಂದಿನ 2 ವಾರಗಳಲ್ಲಿ ಅಧಿಸೂಚನೆ ವಹಿಸಲಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಎಂಎಂ ಕಲ್ಬುರ್ಗಿ ಹತ್ಯೆಯ ನಡೆದು 3 ವರ್ಷವಾಗಿರುವುದರಿಂದ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸುವುದು ಸಾಧ್ಯವಾಗಲಿದೆಯೇ ಇಲ್ಲವೇ ಎನ್ನುವುದರ ಪರಾಮರ್ಶೆ ನಡೆಸಲಾಗುತ್ತಿದೆ ಅಲ್ಲದೇ ಗೌರಿ ಹತ್ಯೆ ಪತ್ತೆಗೆ ರಚಿಸಲಾಗಿದ್ದ ಎಸ್‌ಐಟಿ ತಂಡದ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ಗೃಹ ಇಲಾಖೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಕಲ್ಬುರ್ಗಿ ಹತ್ಯೆಯ ಸಂಬಂಧ ಆ ಪ್ರದೇಶದ ದೂರವಾಣಿ ಕರೆಗಳನ್ನು ಪರಿಶೀಲನೆ ನಡೆಸುವುದು ಅಸಾಧ್ಯ. ಗೌರಿ ಹತ್ಯೆ ಪ್ರಕರಣ ಸಂಬಂಧ ಕೇವಲ 5 ತಿಂಗಳಲ್ಲಿ 1.5 ಕೋಟಿಗೆ ಹೆಚ್ಚು ಕರೆಗಳ ವಿವರಗಳನ್ನು ದಾಖಲಿಸಿದ್ದೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಗೌರಿ ಹತ್ಯೆ ಸಂಬಂಧ ಬಂಧಿತರಾಗಿರುವ ಪರಶುರಾಮ್ ವಾಗ್ಮೋರೆ, ಅಮೋಲ್ ಕಾಳೆ ಸೇರಿ ಐವರು ಆರೋಪಿಗಳು , ಕಲ್ಬುರ್ಗಿಯ ಹತ್ಯೆ ಸಂಬಂಧ ಸರಿಯಾದ ಮಾಹಿತಿ ನೀಡುತ್ತಿಲ್ಲ. ಗೌರಿ ಹತ್ಯೆಗೆ ಬಳಸಿದ ಮಾಧರಿಯ ಪಿಸ್ತೂಲನ್ನು ಎಂಎಂ ಕಲ್ಬುರ್ಗಿ ಹತ್ಯೆಗೂ ಬಳಸಿದ್ದಾರೆ ಎನ್ನುವ ಮಾಹಿತಿ ಇದ್ದರೂ ಅದನ್ನು ಆಧರಿಸಿ ಹಂತಕರನ್ನು ಪತ್ತೆಹಚ್ಚುವುದು ಅಸಾಧ್ಯ ಎಂದಿದ್ದಾರೆ.

ಗೌರಿ ಹತ್ಯೆಯ ನಂತರ ವಿಚಾರವಾದಿ ಭಗವಾನ್ ಕೊಲೆಗೆ ಬಂಧಿತ ಆರೋಪಿಗಳು ಸಂಚು ರೂಪಿಸಿದ್ದರು . ಇವರ ಹಿಟ್‌ಲಿಸ್ಟ್‌ನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಕೂಡಾ ಇರುವುದು ತನಿಖೆಯಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News