ಇಂಡೋನೇಶ್ಯ: ಮಹಿಳೆಯನ್ನು ನುಂಗಿದ ದೈತ್ಯ ಹೆಬ್ಬಾವು

Update: 2018-06-16 18:10 GMT

ಮಕಸರ್ (ಇಂಡೋನೇಶ್ಯ), ಜೂ. 16: ಇಂಡೋನೇಶ್ಯದ ಹಳ್ಳಿಯೊಂದರಲ್ಲಿ ಗುರುವಾರ ತನ್ನ ತರಕಾರಿ ತೋಟಕ್ಕೆ ಹೋದ ಮಹಿಳೆಯೊಬ್ಬರು ನಾಪತ್ತೆಯಾದರು. ಶುಕ್ರವಾರ ಇದೇ ಸ್ಥಳದಲ್ಲಿ ಬಾತುಹೋಗಿದ್ದ ದೈತ್ಯ ಹೆಬ್ಬಾವೊಂದು ಪತ್ತೆಯಾಯಿತು. ಅದರ ಹೊಟ್ಟೆಯಲ್ಲಿ ಮಹಿಳೆ ಪತ್ತೆಯಾದರು.

ಮುನ ದ್ವೀಪದ ಪರ್ಸಿಯಪನ್ ಲವೇಲ ಗ್ರಾಮದಲ್ಲಿ ಪತ್ತೆಯಾದ 7 ಮೀಟರ್ ಉದ್ದದ ಹೆಬ್ಬಾವಿನ ಹೊಟ್ಟೆಯನ್ನು ಸೀಳಿ ನೋಡಿದಾಗ 54 ವರ್ಷದ ಮಹಿಳೆಯ ದೇಹ ಪತ್ತೆಯಾಯಿತು ಎಂದು ಪೊಲೀಸರು ಶನಿವಾರ ತಿಳಿಸಿದರು.

‘‘ಹೆಬ್ಬಾವೇ ಮಹಿಳೆಯನ್ನು ನುಂಗಿದೆ ಎಂಬ ಸಂಶಯವನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು. ಅವರು ಅದನ್ನು ಕೊಂದು ತೋಟದ ಹೊರಗೆ ಎತ್ತಿಕೊಂಡು ಹೋದರು’’ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ತಿಳಿಸಿದರು.

‘‘ಹೆಬ್ಬಾವಿನ ದೇಹವನ್ನು ಸೀಳಿದಾಗ ಒಳಗೆ ಮಹಿಳೆಯ ದೇಹ ಪತ್ತೆಯಾಯಿತು’’ ಎಂದರು.

ತೋಟಕ್ಕೆ ಹೋದ ಮಹಿಳೆ ಗುರುವಾರ ರಾತ್ರಿ ಹಿಂದಿರುಗಿ ಬಾರದಾಗ ಸಂಬಂಧಿಕರು ಹಾಗೂ ಗ್ರಾಮಸ್ಥರು ಗಾಬರಿಗೊಂಡರು. ಹುಡುಕಿದಾಗ ಅವರ ಚಪ್ಪಲಿ ಮತ್ತು ಕತ್ತಿಯಿದ್ದ ಸ್ಥಳದಿಂದ 30 ಮೀಟರ್ ದೂರದಲ್ಲಿ ಹೆಬ್ಬಾವು ಪತ್ತೆಯಾಯಿತು.

ಅವರು ಕೆಲಸ ಮಾಡುತ್ತಿದ್ದ ತೋಟ ಬೆಟ್ಟವೊಂದರ ತಪ್ಪಲಲ್ಲಿದೆ ಹಾಗೂ ಅದಕ್ಕೆ ಹೊಂದಿಕೊಂಡು ಹಲವಾರು ಗುಹೆಗಳಿವೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ಇದೇ ದೇಶದ ಸುಲವೆಸಿ ದ್ವೀಪದ ಗ್ರಾಮವೊಂದರಲ್ಲಿ ರೈತರೊಬ್ಬರನ್ನು ಹೆಬ್ಬಾವು ಇಡೀಯಾಗಿ ನುಂಗಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News