ಈ ಬುಡಕಟ್ಟು ಗ್ರಾಮಕ್ಕೆ ಮೊದಲ ಮೆಟ್ರಿಕ್ ಶಿಕ್ಷಣದ ಸಂಭ್ರಮ

Update: 2018-06-17 03:53 GMT

ರಾಂಚಿ, ಜೂ.17 : ಜಾರ್ಖಂಡ್‌ನ ಲತೇಹಾರ್ ಜಿಲ್ಲೆ ಉಚ್ವಾವಾಲ್ ಗ್ರಾಮದ ಮೊಟ್ಟಮೊದಲ ಬಾರಿಗೆ ಮೆಟ್ರಿಕ್ ಶಿಕ್ಷಣ ಪಡೆದ ಬಾಲಕಿ ಎಂಬ ಹೆಗ್ಗಳಿಕೆಗೆ ಅನು ಕುಮಾರಿ ಪಾತ್ರಳಾಗಿದ್ದಾಳೆ.

ರಾಜ್ಯದ 12 ಪ್ರಾಚೀನ ಬುಡಕಟ್ಟುಗಳಲ್ಲೊಂದಾದ ಪರಾಹಿಯಾ ಬುಡಕಟ್ಟು ಜನಾಂಗದ ಮಂದಿಯೇ ಅಧಿಕವಾಗಿರುವ ಈ ಗ್ರಾಮ, ರಾಜಧಾನಿ ರಾಂಚಿಯಿಂದ 130 ಕಿಲೋಮೀಟರ್ ದೂರದಲ್ಲಿದೆ. ಮಣಿಕಾ ತಾಲೂಕಿನ ಈ ಗ್ರಾಮ ಅತ್ಯಂತ ಹಿಂದುಳಿದ ಗ್ರಾಮವಾಗಿದೆ. ಜಾರ್ಖಂಡ್ ಪರೀಕ್ಷಾ ಮಂಡಳಿ ನಡೆಸಿದ ಮೆಟ್ರಿಕ್ ಪರೀಕ್ಷೆಯಲ್ಲಿ 18 ವರ್ಷದ ಅನು ಯಶಸ್ಸು ಗಳಿಸಿರುವುದು ತಂದೆ ಚಲಿತಾರ್ ಪರಾಹಿಯಾ (42) ಅವರ ಹೆಮ್ಮೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಈ ಬುಡಕಟ್ಟು ಜನಾಂಗದಲ್ಲಿ ಹೆಣ್ಣುಮಕ್ಕಳಿಗೆ ಬಾಲ್ಯದಲ್ಲೇ ವಿವಾಹ ಮಾಡಲಾಗುತ್ತದೆ. ಆದರೆ ಅನು ಕುಮಾರಿಗೆ ಶಿಕ್ಷಣ ಕೊಡಿಸುವ ಮೂಲಕ ಬುಡಕಟ್ಟಿನ ಸಂಪ್ರದಾಯ ಉಲ್ಲಂಘಿಸುವ ಧೈರ್ಯವನ್ನು ಚಲಿತಾರ್ ತೋರಿದ್ದರು.

ಈ ಗ್ರಾಮದಲ್ಲಿ ಯಾವ ಬಾಲಕಿಯರೂ ಇದುವರೆಗೆ ಮಂಡಳಿಯ ಪರೀಕ್ಷೆಗೆ ಹಾಜರಾಗಿರಲಿಲ್ಲ. ಬಾಲಕರು ಹಾಜರಾದರೂ ಉತ್ತೀರ್ಣರಾಗಿರಲಿಲ್ಲ. ಈ ಸಮುದಾಯದ ಮಂದಿ ಬಹುತೇಕ ದಟ್ಟ ಅರಣ್ಯದಲ್ಲಿ ವಾಸವಿದ್ದು, ಜೀವನಾಧಾರಕ್ಕಾಗಿ ಕಾಡುತ್ಪತ್ತಿಯನ್ನೇ ಅವಲಂಬಿಸಿದ್ದಾರೆ.

"ಈ ಸಮುದಾಯದ ಸಾಮಾಜಿಕ- ಆರ್ಥಿಕ ಸ್ಥಿತಿಗತಿ ಸುಧಾರಣೆಗಾಗಿ ಸರ್ಕಾರ ಪ್ರಯತ್ನಗಳನ್ನು ಮಾಡಿದ್ದರೂ ಅದು ತೃಪ್ತಿಕರವಾಗಿಲ್ಲ" ಎಂದು ಬುಡಕಟ್ಟು ಮುಖಂಡ ಹಾಗೂ ಜಿಲ್ಲಾ ಪರಿಷತ್‌ನ ಮಾಜಿ ಸದಸ್ಯ ರಘುಪಾಲ್ ಸಿಂಗ್ ಹೇಳಿದ್ದಾರೆ.

ಅನುಕುಮಾರಿ ತೀರಾ ಬಡ ಕುಟುಂಬದಲ್ಲಿ ಬೆಳೆದಿದ್ದು, ನಾಲ್ವರು ಮಕ್ಕಳ ಪೈಕಿ ಕೊನೆಯವಳು. ಅನು 2 ತಿಂಗಳ ಬಾಲಕಿಯಾಗಿದ್ದಾಗಲೇ ತಾಯಿ ತೀರಿಕೊಂಡಿದ್ದರಿಂದ ಅನಕ್ಷರಸ್ಥರಾಗಿದ್ದ ಚಲಿತಾರ್ ಕೂಲಿ ಕೆಲಸ ಮಾಡಿಕೊಂಡೇ ಮಗುವನ್ನು ಬೆಳೆಸಿದ್ದರು. ಇತರ ಮೂರು ಮಕ್ಕಳು ಅರ್ಧದಿಂದ ಶಾಲೆ ಬಿಟ್ಟಿದ್ದಾರೆ. ತಂದೆಯ ಪ್ರೋತ್ಸಾಹ ಹಾಗೂ ಬೆಂಬಲ ಮತ್ತು ಅರೆಶಿಕ್ಷಕ ಕೃಷ್ಣಕುಮಾರ್ ರಾಮ್ ಅವರ ಮಾರ್ಗದರ್ಶನ ಈ ಯಶಸ್ಸಿಗೆ ಕಾರಣ ಎಂದು ಬಾಲಕಿ ಹೇಳುತ್ತಾಳೆ.

ಐದನೇ ತರಗತಿ ಬಳಿಕ ಸನಿವಾಸ ಶಿಕ್ಷಣ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದ ಈಕೆಗೆ ಸರ್ಕಾರಿ ಸೇವೆಗೆ ಸೇರುವ ಅಭಿಲಾಷೆ. "ಎಲ್ಲ ವೈರುದ್ಧ್ಯಗಳ ನಡುವೆ ಆಕೆ ಯಶಸ್ಸು ಸಾಧಿಸಿದ್ದಾಳೆ. ಆಕೆ ಇನ್ನಷ್ಟು ಎತ್ತರಕ್ಕೆ ಏರುತ್ತಾಳೆ ಎಂಬ ಭರವಸೆ ಇದೆ" ಎಂದು ತಂದೆ ಚಲಿತಾರ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News