ಮದ್ಯ ತಯಾರಿಕೆ ಕಂಪನಿ ಪ್ರಾಯೋಜಿಸಿದ್ದ ‘ಪಂದ್ಯ ಪುರುಷ’ ಪ್ರಶಸ್ತಿಯನ್ನು ನಿರಾಕರಿಸಿದ ಈಜಿಪ್ಟ್‌ನ ಗೋಲ್‌ಕೀಪರ್

Update: 2018-06-17 09:58 GMT

ಮಾಸ್ಕೊ.ಜೂ.17: ಈಜಿಪ್ಟ್‌ನ ಗೋಲ್‌ಕೀಪರ್ ಮುಹಮ್ಮದ್ ಎಲ್-ಶೆನಾವಿ ಅವರು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಉರುಗ್ವೆ ವಿರುದ್ಧದ ಪಂದ್ಯದಲ್ಲಿಯ ತನ್ನ ಶ್ರೇಷ್ಠ ಪ್ರದರ್ಶನಕ್ಕಾಗಿ ಒಲಿದು ಬಂದಿದ್ದ ‘ಮ್ಯಾನ್ ಆಫ್ ದಿ ಮ್ಯಾಚ್’ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಬಿಯರ್ ಬ್ರಾಂಡ್ ‘ಬಡ್‌ವೈಸರ್’ ಈ ಪ್ರಶಸ್ತಿಯನ್ನು ಪ್ರಾಯೋಜಿಸಿತ್ತು.

ಶುಕ್ರವಾರ ಉರುಗ್ವೆ ವಿರುದ್ಧದ ಪಂದ್ಯದಲ್ಲಿ ಎಲ್-ಶೆನಾವಿ ಅಪ್ರತಿಮ ಕೌಶಲ್ಯವನ್ನು ಪ್ರದರ್ಶಿಸಿದ್ದರು. ಪಂದ್ಯದ 89ನೇ ನಿಮಿಷದವರೆಗೂ ಕಲ್ಲುಗೋಡೆಯಂತೆ ನಿಂತಿದ್ದ ಅವರು ಗೋಲು ಬಾರಿಸುವ ಉರುಗ್ವೆಯ ಪ್ರತಿಯೊಂದೂ ಪ್ರಯತ್ನವನ್ನು ವಿಫಲಗೊಳಿಸಿದ್ದರು. ಕೊನೆಯ ಕ್ಷಣದಲ್ಲಿ ಜೋಸ್ ಗಿಮ್ನೆಝ್ ಗೋಲು ಬಾರಿಸುವಲ್ಲಿ ಸಫಲರಾಗಿದ್ದು,ಉರುಗ್ವೆ 1-0 ಗೋಲಿನಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.

ಆದರೆ ತನ್ನ ಅಸಾಧಾರಣ ಪ್ರದರ್ಶನಕ್ಕಾಗಿ ಎಲ್-ಶೆನಾವಿ ಪಂದ್ಯ ಪುರುಷ ಪ್ರಶಸ್ತಿಗೆ ಪಾತ್ರರಾಗಿದ್ದರು. ಆದರೆ ಅವರು ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ.

ಇಸ್ಲಾಂ ಧರ್ಮವು ಮದ್ಯಪಾನವನ್ನು ನಿಷೇಧಿಸಿರುವುದರಿಂದ ಅವರು ಮದ್ಯ ತಯಾರಿಕೆ ಸಂಸ್ಥೆಯು ಪ್ರಾಯೋಜಿಸಿದ್ದ ಪ್ರಶಸ್ತಿಯನ್ನು ಒಪ್ಪಿಕೊಳ್ಳಲಿಲ್ಲ.

ಈಜಿಪ್ಟ್ ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರವಾಗಿದ್ದು, ಅಲ್ಲಿ ಮದ್ಯ ಮಾರಾಟ ಕುರಿತ ಕಾನೂನುಗಳು ಕಠಿಣವಾಗಿವೆ ಮತ್ತು ಮದ್ಯಪಾನ ಸಾಮಾನ್ಯವಾಗಿ ಸ್ವೀಕಾರಾರ್ಹವಲ್ಲ.

ಈ ಬಾರಿಯ ವಿಶ್ವಕಪ್‌ನಲ್ಲಿ ಆಡುತ್ತಿರುವ ಸೆನೆಗಲ್,ಮೊರೊಕ್ಕೊ,ಸೌದಿ ಅರೇಬಿಯಾ ಮತ್ತು ಇರಾನ್‌ಗಳು ಸಹ ಮದ್ಯದ ಕುರಿತು ಇಂತಹುದೇ ನಿಲುವು ಹೊಂದಿವೆ. ಈ ರಾಷ್ಟ್ರಗಳ ತಂಡಗಳ ಆಟಗಾರರು ಸಹ ಪಂದ್ಯಪುರುಷ ಪ್ರಶಸ್ತಿಗೆ ಪಾತ್ರರಾದರೆ ಅದನ್ನು ತಿರಸ್ಕರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News