ಪನ್ಸಾರೆ ಹತ್ಯೆ ಪ್ರಕರಣ: ಪರಶುರಾಮ ವಾಗ್ಮೋರೆಯ ವಿಚಾರಣೆ ನಡೆಸಲಿರುವ ಮಹಾರಾಷ್ಟ್ರ ‘ಸಿಟ್’

Update: 2018-06-17 17:11 GMT

ಪುಣೆ, ಜೂ.17: ಹಿರಿಯ ಕಮ್ಯುನಿಸ್ಟ್ ಮುಖಂಡ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ‘ಸಿಟ್’ (ವಿಶೇಷ ತನಿಖಾ ತಂಡ) ತಂಡ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಬಂಧಿತ ಶ್ರೀರಾಮಸೇನೆ ಕಾರ್ಯಕರ್ತ ಪರಶುರಾಮ ವಾಗ್ಮೋರೆಯನ್ನು ವಿಚಾರಣೆ ನಡೆಸಲು ನಿರ್ಧರಿಸಿದೆ.

 ರಾಜ್ಯದ ಸಿಟ್ ಅಧಿಕಾರಿಗಳ ತಂಡವೊಂದು ಶೀಘ್ರವೇ ಕರ್ನಾಟಕಕ್ಕೆ ತೆರಳಿ ವಾಗ್ಮೋರೆಯ ವಿಚಾರಣೆ ನಡೆಸಲಿದೆ ಎಂದು ಎಡಿಜಿ (ಅಪರಾಧ ತನಿಖಾ ವಿಭಾಗ) ಸಂಜಯ್ ಕುಮಾರ್ ತಿಳಿಸಿದ್ದಾರೆ. ಸಂಜಯ್ ಕುಮಾರ್ ಅವರು ಪನ್ಸಾರೆ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಟ್ ತಂಡದ ಮುಖ್ಯಸ್ಥರಾಗಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರ್, ಗೌರಿ ಲಂಕೇಶ್ ಮತ್ತು ಪನ್ಸಾರೆ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳು ವಿಭಿನ್ನ ಸಂಘಟನೆಗೆ ಸೇರಿರುವ ಕಾರಣ ಮಹಾರಾಷ್ಟ್ರ ಸಿಐಟಿ ಅಧಿಕಾರಿಗಳು ವಾಗ್ಮೋರೆಯವರನ್ನು ಕಸ್ಟಡಿಗೆ ಪಡೆಯಲು ಬಯಸುವುದಿಲ್ಲ ಎಂದು ತಿಳಿಸಿದರು. ಪನ್ಸಾರೆ ಪ್ರಕರಣದಲ್ಲಿ ಆರೋಪಿಗಳು ಸನಾತನ ಸಂಸ್ಥೆಗೆ ಸೇರಿದ್ದರೆ, ಗೌರಿ ಲಂಕೇಶ್ ಪ್ರಕರಣದಲ್ಲಿ ಶ್ರೀರಾಮ ಸೇನೆಗೆ ಸೇರಿದವರಾಗಿದ್ದಾರೆ ಎಂದ ಕುಮಾರ್, ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಎರಡು ಆಯುಧಗಳನ್ನು ಬಳಸಲಾಗಿದೆ ಎಂದು ತಿಳಿಸಿದರು.

ಮಹಾರಾಷ್ಟ್ರ ಮತ್ತು ಕರ್ನಾಟಕ ಸಿಟ್ ತಂಡಗಳು ಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿದ್ದು ಮಹಾರಾಷ್ಟ್ರ ಸಿಟ್ ತಂಡ ಕಳೆದ ತಿಂಗಳು ಕರ್ನಾಟಕಕ್ಕೆ ಭೇಟಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಸಿಟ್ ಅಧಿಕಾರಿಗಳು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಳಸಲಾಗಿರುವ 7.65 ಎಂಎಂ ಸ್ಥಳೀಯ ನಿರ್ಮಿತ ಪಿಸ್ತೂಲನ್ನು ಇನ್ನಷ್ಟೇ ವಶಕ್ಕೆ ಪಡೆಯಬೇಕಿದೆ. ಇದೇ ಆಯುಧ ಬಳಸಿ ಪನ್ಸಾರೆ, ಚಿಂತಕ ಎಂ.ಎಂ.ಕಲ್ಬುರ್ಗಿ ಹತ್ಯೆ ನಡೆಸಲಾಗಿದೆ ಎಂದು ವರದಿಯಾಗಿದೆ. ಕರ್ನಾಟಕ ಸಿಟ್ ಅಧಿಕಾರಿಗಳು ಗೌರಿ ಲಂಕೇಶ್ ಹಾಗೂ ಪನ್ಸಾರೆ ಪ್ರಕರಣದ ಮಧ್ಯೆ ಇರುವ ಸಂಬಂಧದ ಕುರಿತು ಹೇಳಿಕೆ ನೀಡಿರುವ ಕಾರಣ ಮಹಾರಾಷ್ಟ್ರ ಸಿಟ್ ತಂಡವು ವಾಗ್ಮೋರೆಯನ್ನು ಕಸ್ಟಡಿಗೆ ಕೇಳಬೇಕು. ಅದರಲ್ಲೂ ವಿಶೇಷವಾಗಿ ವೈದ್ಯಕೀಯ ವರದಿಯಲ್ಲಿ ಇಬ್ಬರ ಹತ್ಯೆಗೂ ಏಕರೀತಿಯ ಆಯುಧ ಬಳಸಿರುವ ಬಗ್ಗೆ ಉಲ್ಲೇಖಿಸಿರುವುದರಿಂದ ವಾಗ್ಮೋರೆ ಕಸ್ಟಡಿಗೆ ಪಡೆಯುವುದು ಅತೀ ಅಗತ್ಯವಾಗಿದೆ ಎಂದು ಪನ್ಸಾರೆಯ ಸೊಸೆ ಮೇಘಾ ಪನ್ಸಾರೆ ಮಾಧ್ಯಮದವರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News