ಸ್ವಿಝರ್‌ಲ್ಯಾಂಡ್‌ ವಿಶ್ವಕಪ್ ಫುಟ್ಬಾಲ್ ಆಡಲು ನೆರವಾದ ಆಟಗಾರ ಎದೆಯಲ್ಲಿ ಯಕೃತ್ತನ್ನಿಟ್ಟುಕೊಂಡು ಹುಟ್ಟಿದ್ದ!

Update: 2018-06-17 18:24 GMT

 ಮಾಸ್ಕೊ,ಜೂ.17: ಸ್ವಿಝರ್‌ಲ್ಯಾಂಡ್‌ ಫುಟ್ಬಾಲ್ ತಂಡ ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡುತ್ತಿದ್ದರೆ ಅದಕ್ಕೆ ಮುಖ್ಯ ಕಾರಣಗಳಲ್ಲಿ ರಿಕಾರ್ಡೊ ರಾಡ್ರಿಗ್ಯೂಝ್ ಒಬ್ಬರಾಗಿದ್ದಾರೆ. 10 ಅರ್ಹತಾ ಪಂದ್ಯಗಳಲ್ಲಿ ಒಂಭತ್ತನ್ನು ಗೆದ್ದಿದ್ದರೂ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಪಡೆಯಲು ಸ್ವಿಸ್ ತಂಡವು ಉತ್ತರ ಐರ್ಲೆಂಡ್ ವಿರುದ್ಧ ಪ್ಲೇ-ಆಫ್ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು. ಪ್ರಥಮಾರ್ಧದಲ್ಲಿ ಪಂದ್ಯದ ಏಕೈಕ ಗೋಲನ್ನು ದಾಖಲಿಸಿದ್ದ ರಿಕಾರ್ಡೊ 91ನೇ ನಿಮಿಷದಲ್ಲಿ ಎದುರಾಳಿ ತಂಡದ ಜಾನಿ ಇವಾನ್ಸ್‌ರ ಹೆಡರ್‌ನ್ನು ವಿಫಲಗೊಳಿಸುವ ಮೂಲಕ ತನ್ನ ತಂಡಕ್ಕೆ 1-0 ಗೋಲಿನಿಂದ ವಿಜಯವನ್ನು ದೊರಕಿಸಿದ್ದರು. ಮಿಲಾನ್ ತಂಡದ ಡಿಫೆಂಡರ್ ಆಗಿರುವ ರಿಕಾರ್ಡೊ ಇಲ್ಲದಿದ್ದರೆ ಸ್ವಿಸ್ ತಂಡ ವಿಶ್ವಕಪ್ ಪಂದ್ಯಾವಳಿಯನ್ನು ಪ್ರವೇಶಿಸುತ್ತಿರಲಿಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಒಪ್ಪುತ್ತಾರೆ.

ರಿಕಾರ್ಡೊ ಜನಿಸಿದಾಗಿನ ಅವರ ಸ್ಥಿತಿಯನ್ನು ಪರಿಗಣಿಸಿದರೆ ಅವರು ಇಂದು ಫುಟ್ಬಾಲ್ ಆಟಗಾರನಾಗಿರುವುದು ನಿಜಕ್ಕೂ ಬೆರಗು ಮೂಡಿಸುತ್ತದೆ. ರಿಕಾರ್ಡೊ ಉನ್ನತ ಕ್ರೀಡಾಪಟುವಾಗುತ್ತಾನೆಂದು ಯಾರಾದರೂ ಯೋಚಿಸಿದ್ದರೆ ಅವರು ಮಾನಸಿಕ ಸ್ವಾಸ್ಥ ಕಳೆದುಕೊಂಡಿದ್ದಾರೆ ಎಂದು ಪರಿಗಣಿಸಲಾಗುತ್ತಿತ್ತು ಎಂದು ಅವರ ತಾಯಿ ಮರ್ಸೆಲಾ 2011ರಲ್ಲಿ ಹೇಳಿದ್ದರು.

ಅವರು ಹಾಗೆನ್ನಲು ಕಾರಣವಿತ್ತು. ಚಿಲಿ ಸಂಜಾತೆ ಮರ್ಸೆಲಾ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ ಗರ್ಭದಲ್ಲಿದ್ದ ಮಗುವಿಗೆ ಡಯಾಫ್ರಮಾಟಿಕ್ ಹರ್ನಿಯಾ ಇದೆ ಎನ್ನುವುದನ್ನು ವ್ಯೆದ್ಯರು ಪತ್ತೆ ಹಚ್ಚಿದ್ದರು. ಈ ವೈಕಲ್ಯದಲ್ಲಿ ಎದೆಯ ಡಯಾಫ್ರಮ್ ಅಥವಾ ವಪೆಯಲ್ಲಿ ರಂಧ್ರವುಂಟಾಗುತ್ತಿದ್ದು, ಅದರ ಮೂಲಕ ಹೊಟ್ಟೆಯಲ್ಲಿನ ಅಂಗಗಳು ಎದೆಗೂಡನ್ನು ಪ್ರವೇಶಿಸುತ್ತವೆ.

ರಿಕಾರ್ಡೊರ ಪ್ರಕರಣದಲ್ಲಿ ಹೊಟ್ಟೆಯಲ್ಲಿರಬೇಕಿದ್ದ ಜಠರ,ಗುಲ್ಮ,ಯಕೃತ್ತು ಮತ್ತು ಕರುಳು ಎದೆಗೂಡಿನಲ್ಲಿ ಜಾಗ ಮಾಡಿಕೊಂಡಿದ್ದವು. ಅವರು ಜನಿಸಿದ ತಕ್ಷಣ ತುರ್ತು ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು. ಅವರು ಬದುಕುಳಿಯುವ ಸಾಧ್ಯತೆ ಶೇ.50ರಷ್ಟಿದೆ ಎಂದು ವೈದ್ಯರು ಮರ್ಸೆಲಾಗೆ ತಿಳಿಸಿದ್ದರಾದರೂ ತನ್ನ ಮಾತಿನಲ್ಲಿಯೇ ಅವರಿಗೆ ನಂಬಿಕೆಯಿರಲಿಲ್ಲ. ಹೀಗಾಗಿ ಮಗುವನ್ನು ನೋಡಲು ಧರ್ಮಗುರುಗಳನ್ನು ಕಳುಹಿಸಿದ್ದರು. ಅವರನ್ನು ಕಂಡ ತಕ್ಷಣ ಹೊರಟು ಹೋಗುವಂತೆ ಕೇಳಿಕೊಂಡಿದ್ದ ಮರ್ಸೆಲಾರ ತಂದೆ ನೆಲ್ಸನ್‌‘ ನನ್ನ ಮೊಮ್ಮಗ ಸಾಕಷ್ಟು ಬಲವಾಗಿದ್ದಾನೆ. ಆತ ಬದುಕುಳಿಯುತ್ತಾನೆ. ಆ ಬಗ್ಗೆ ನೀವು ಚಿಂತಿಸಬೇಡಿ’ ಎಂದು ಹೇಳಿದ್ದರು.

ಅಜ್ಜ ಅಂದುಕೊಂಡಂತೆಯೇ ಆಗಿತ್ತು. ಮರ್ಸೆಲಾರ ಸೋದರ ಮಡೋನ್ನಾಳ ಪುಟ್ಟ ಚಿತ್ರವೊಂದನ್ನು ತನ್ನ ಸೋದರಳಿಯನ ಹಾಸಿಗೆಯಲ್ಲಿ ಇರಿಸಿದ್ದರು. ನಂತರ ಮಗು ಅದ್ಭುತವಾಗಿ ಚೇತರಿಸಿಕೊಂಡಿತ್ತು. ‘ ನಮ್ಮ ಲೇಡಿ(ಮಡೋನ್ನಾ) ಒಳ್ಳೆಯ ಕೆಲಸ ಮಾಡಿದ್ದರು’ ಎಂದು ಮರ್ಸೆಲಾ 2011ರಲ್ಲಿ ಸ್ಮರಿಸಿಕೊಂಡಿದ್ದರು.

ತನ್ನ ಬದುಕಿನ ಮೊದಲ ಮೂರು ವರ್ಷಗಳಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಪುಟ್ಟ ರಿಕಾರ್ಡೊ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಬೇಕಾಗಿತ್ತು. ಮಗುವಿಗೆ ಸಣ್ಣ ಶೀತವಾಗಲೂ ಮರ್ಸೆಲಾ ಅವಕಾಶ ನಿಡುತ್ತಿರಲಿಲ್ಲ. ಅಂತಹದೇನಾದರೂ ಆದರೆ ಅದು ಅಪಾಯಕಾರಿಯಾಗುತ್ತದೆ ಎಂದು ವೈದ್ಯರು ಮೊದಲೇ ಎಚ್ಚರಿಕೆ ನೀಡಿದ್ದರು.

ತಾಯಿ-ಮಗನ ನಡುವಿನ ನಂಟು ಅತ್ಯಂತ ಗಾಢವಾಗಿತ್ತು ಮತ್ತು ಅದು ಎಂದಿಗೂ ಬದಲಾಗಿರಲಿಲ್ಲ. 2015ರಲ್ಲಿ ಮರ್ಸೆಲಾ ಕ್ಯಾನ್ಸರ್‌ನಿಂದ ನಿಧನರಾದಾಗಿನಿಂದ ರಿಕಾರ್ಡೊ ತನ್ನ ಬೆನ್ನಿನ ಮೇಲೆ ‘68’ ಸಂಖ್ಯೆಯ ಹಚ್ಚೆಯನ್ನು ಹೊಂದಿದ್ದಾರೆ. ಅದು ಅವರ ತಾಯಿಯ ಜನನದ ವರ್ಷ. ಮರ್ಸೆಲಾ 1968ರಲ್ಲಿ ಜನಿಸಿದ್ದರು. ಕುತ್ತಿಗೆಯಲ್ಲಿ ‘ಜೆ’ ಮತ್ತು ‘ಎಂ’ ಅಕ್ಷರಗಳನ್ನೂ ಅವರು ಹಚ್ಚೆ ಹಾಕಿಸಿಕೊಂಡಿದ್ದಾರೆ. ‘ಜೆ’ ತಂದೆ ಜೋಸ್ ಮತ್ತು ‘ಎಂ’ ಮರ್ಸೆಲಾರನ್ನು ಪ್ರತಿನಿಧಿಸುತ್ತಿವೆ.

ಆರರ ಹರೆಯದಲ್ಲೇ ತನ್ನೂರು ಶ್ವಾಮೆಂಡಿಂಗೆನ್‌ನ ಫುಟ್ಬಾಲ್ ಕ್ಲಬ್‌ನಲ್ಲಿ ಆಡತೊಡಗಿದ್ದ ಅವರು ನಂತರ ಝ್ಯೂರಿಚ್ ತಂಡವನ್ನು ಸೇರಿಕೊಂಡಿದ್ದರು. 2009ರಲ್ಲಿ ಸ್ವಿಸ್ ತಂಡ್ ನೈಜೀರಿಯಾ ವಿರುದ್ಧ ಗೆದ್ದಾಗ ಅಂಡರ್ 17 ಚಾಂಪಿಯನ್ ಆಗಿದ್ದ ಅವರು ಎರಡು ವರ್ಷಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ನಂತರದೆಲ್ಲವೂ ಇತಿಹಾಸವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News