ಶುಭಾರಂಭದ ನಿರೀಕ್ಷೆಯಲ್ಲಿ ಬೆಲ್ಜಿಯಂ

Update: 2018-06-17 19:05 GMT

ಸೋಚಿ, ಜೂ.17: ಫಿಫಾ ರ್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಬೆಲ್ಜಿಯಂ ತಂಡ ಸೋಮವಾರ ಇಲ್ಲಿ ನಡೆಯಲಿರುವ ವಿಶ್ವಕಪ್‌ನ ‘ಜಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಪನಾಮಾ ತಂಡವನ್ನು ಎದುರಿಸಲಿದ್ದು ಫುಟ್ಬಾಲ್ ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದೆ.

 ಇಂಗ್ಲೆಂಡ್, ಟ್ಯುನಿಶಿಯಾ ತಂಡದೊಂದಿಗೆ ‘ಜಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಬೆಲ್ಜಿಯಂನಾಕೌಟ್ ಹಂತಕ್ಕೆ ಸುಲಭವಾಗುವ ತೇರ್ಗಡೆಯಾಗುವ ಸಾಧ್ಯತೆ ಅಧಿಕವಿದೆ. ಸೋಮವಾರ ಕೋಸ್ಟರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 4-1 ಅಂತರದಿಂದ ಜಯ ಸಾಧಿಸಿರುವ ಬೆಲ್ಜಿಯಂ ಸುಮಾರು 2 ವರ್ಷಗಳಿಂದ 19 ಪಂದ್ಯಗಳಲ್ಲಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದೆ. ಬೆಲ್ಜಿಯಂ ತಂಡ ರಶ್ಯದ ವಾತಾವರಣಕ್ಕೆ ಹೊಂದಿಕೊಳ್ಳಲು ಬೇಗನೆ ರಶ್ಯಕ್ಕೆ ಆಗಮಿಸಿದೆ. 2014ರ ವಿಶ್ವಕಪ್ ಹಾಗೂ 2016ರ ಯುರೋ ಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ನಿರ್ಗಮಿಸಿರುವ ಬೆಲ್ಜಿಯಂ ಇದೀಗ ಆಟಗಾರರ ಗಾಯದ ಸಮಸ್ಯೆಯನ್ನು ಎದುರಿಸುತ್ತಿದೆ. ಥಾಮಸ್ ವೆರ್ಮಲಿನ್ ಹಾಗೂ ವಿನ್ಸೆಂಟ್ ಕಂಪೆನಿ ಫಿಟ್ನೆಸ್ ಪಡೆಯಲು ಪರದಾಡುತ್ತಿದ್ದಾರೆ. ವೆರ್ಮಲಿನ್ ಸ್ನಾಯು ಸೆಳೆತದಿಂದ ಬಳಲುತ್ತಿದ್ದು ಪನಾಮಾ ವಿರುದ್ಧ ಆಡುವ ಸಾಧ್ಯತೆಯಿಲ್ಲ. ಮ್ಯಾಂಚೆಸ್ಟರ್ ಸಿಟಿ ನಾಯಕ ಕಂಪೆನಿ ಇಂಗ್ಲೆಂಡ್ ವಿರುದ್ಧ ಜೂ.28 ರಂದು ನಡೆಯುವ ಪಂದ್ಯದಲ್ಲಿ ಲಭ್ಯವಿರುವ ನಿರೀಕ್ಷೆಯಿದೆ. ಬೆಲ್ಜಿಯಂ-ಪನಾಮಾ ನಡುವೆ ನಡೆಯುವ ಪಂದ್ಯ ಏಕಪಕ್ಷೀಯವಾಗಿ ಸಾಗುವ ಸಾಧ್ಯತೆ ಯಿದೆ. 1986ರ ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಲ್ಲಿ ಮೆಕ್ಸಿಕೊಕ್ಕೆ ಸೋತ ಬಳಿಕ ಉತ್ತರ ಅಮೆರಿಕ, ಕೇಂದ್ರ ಅಮೆರಿಕ ಹಾಗೂ ಕೆರಿಬಿ ಯನ್ ದೇಶಗಳ ವಿರುದ್ಧ ಆಡಿರುವ 11 ಪಂದ್ಯಗಳಲ್ಲಿ ಬೆಲ್ಜಿಯಂ ಅಜೇಯವಾಗುಳಿದಿದೆ. 9ರಲ್ಲಿ ಜಯ, 2ರಲ್ಲಿ ಡ್ರಾ ಸಾಧಿಸಿದೆ. ಮತ್ತೊಂದೆಡೆ, ಪನಾಮಾ ತಂಡ ಯುರೋಪ್ ತಂಡಗಳ ವಿರುದ್ಧ ಇನ್ನಷ್ಟೇ ಗೆಲುವು ದಾಖಲಿಸಬೇಕಾಗಿದೆ. 9 ಪಂದ್ಯಗಳಲ್ಲಿ 4ರಲ್ಲಿ ಡ್ರಾ ಹಾಗೂ 5ರಲ್ಲಿ ಸೋಲುಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News