ಸ್ವಘೋಷಿತ ದೇವಮಾನವ ದಾತಿ ಮಹಾರಾಜ್ ಆಶ್ರಮದಿಂದ 600 ಯುವತಿಯರು ನಾಪತ್ತೆ!

Update: 2018-06-18 11:31 GMT

ರಾಜಸ್ಥಾನ, ಜೂ.18: ಅತ್ಯಾಚಾರ ಆರೋಪ ಹೊತ್ತಿರುವ ಸ್ವಘೋಷಿತ ದೇವಮಾನವ ದಾತಿ ಮಹಾರಾಜ್ ಇನ್ನೂ ತಲೆಮರೆಸಿಕೊಂಡಿದ್ದು, ರಾಜಸ್ಥಾನದ ಅಲವಾಸ್ ಪ್ರದೇಶದ ಪಾಲಿ ಎಂಬಲ್ಲಿನ ಆತನ ಆಶ್ರಮದ ಸುಮಾರು 600 ಯುವತಿಯರೂ ನಾಪತ್ತೆಯಾಗಿದ್ದಾರೆ.

ದಾತಿ ಮಹಾರಾಜ್ ಈ ಹಿಂದೆ ಹೇಳಿಕೊಂಡಂತೆ ಆತನ ಆಶ್ರಮದಲ್ಲಿ ಕನಿಷ್ಠ 700 ಯುವತಿಯರಿದ್ದರು. ಸದ್ಯ ಅಲ್ಲಿ ಕೇವಲ 100 ಮಂದಿ ಮಾತ್ರ ಇದ್ದು ಉಳಿದವರು ಎಲ್ಲಿದ್ದಾರೆಂದು ತಿಳಿದು ಬಂದಿಲ್ಲ.

ಪೊಲೀಸರು ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸುತ್ತಿದ್ದು, ಒಂದೋ ಯುವತಿಯರನ್ನು ಆಶ್ರಮದಿಂದ ದೂರದ ಸ್ಥಳಕ್ಕೆ ಕಳುಹಿಸಲಾಗಿದೆ ಇಲ್ಲವೇ ಅವರೆಲ್ಲಾ ರಜೆಯಲ್ಲಿದ್ದಾರೆಂದು ನಂಬಲಾಗಿದೆ.

ದಾತಿ ಮಹಾರಾಜ್ ಅನುಯಾಯಿ ಎಂದು ಹೇಳಲಾದ 25 ವರ್ಷದ ಯುವತಿಯೊಬ್ಬಳು ತನ್ನನ್ನು ದಾತಿ ಮತ್ತಾತನ ಇತರ ಅನುಯಾಯಿಗಳು ಅತ್ಯಾಚಾರಗೈದಿದ್ದಾರೆಂದು ಆರೋಪಿಸಿದ್ದಳಲ್ಲದೆ, ಈ ಘಟನೆ ನಡೆದ ನಂತರ ತಾನು ಒಂದು ದಶಕದಿಂದ ಇದ್ದ ಆಶ್ರಮವನ್ನು ತೊರೆದಿದ್ದಾಗಿಯೂ ಹೇಳಿದ ನಂತರ ಈ ಆಶ್ರಮದ ಕರಾಳ ಅಧ್ಯಾಯ ಹೊರಜಗತ್ತಿಗೆ ತಿಳಿದು ಬಂದಿತ್ತು.

ಆಶ್ರಮದ ಇನ್ನೊಬ್ಬ ಮಹಿಳಾ ಅನುಯಾಯಿ ತನ್ನನ್ನು ದಾತಿ ಮಹಾರಾಜ್ ನ ಕೊಠಡಿಯೊಳಕ್ಕೆ ತಳ್ಳುತ್ತಿದ್ದಳು. ಇದು ಅಲ್ಲಿನ ಸಂಪ್ರದಾಯವೆಂದೂ ಹೇಳಿದ್ದಳು. ತನ್ನನ್ನು ರಾಜಸ್ಥಾನದ ಆಶ್ರಮದಲ್ಲಿ ಮಾತ್ರವಲ್ಲದೆ ದಿಲ್ಲಿಯ ಆಶ್ರಮದಲ್ಲೂ ಲೈಂಗಿಕವಾಗಿ ಶೋಷಿಸಲಾಗಿತ್ತು ಎಂದು ಯುವತಿ ಆರೋಪಿಸಿದ್ದಳು. ತನ್ನ ಹೆತ್ತವರ ಬಳಿ ಈ ಬಗ್ಗೆ ಹೇಳಿ ನಂತರ ಆಕೆ ಪೊಲೀಸ್ ದೂರು ನೀಡಿದ್ದಳು.

ತನ್ನ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು ತಾನು ತನಿಖೆಗೆ ಸಹಕರಿಸಲು ಸಿದ್ಧ ಎಂದು ಈ ಹಿಂದೆ ಹೇಳಿಕೊಂಡಿದ್ದ ದಾತಿ ಮಹಾರಾಜ್ ನಂತರ ನಾಪತ್ತೆಯಾಗಿದ್ದ. ದಿಲ್ಲಿಯ ಕ್ರೈಂ ಬ್ರ್ಯಾಂಚಿನ 12 ಮಂದಿಯ ತಂಡ ಆಶ್ರಮದ ಮೇಲೆ ದಾಳಿ ನಡೆಸಿ ಮೂರು ತಾಸುಗಳಿಗೂ ಹೆಚ್ಚು ಕಾಲ ತಪಾಸಣೆ ನಡೆಸಿ ಕೆಲವೊಂದು  ದಾಖಲೆಗಳನ್ನು ವಶಪಡಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News