ವಾಲ್ಮೀಕಿ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡಲು ಒತ್ತಾಯ

Update: 2018-06-18 12:47 GMT

ಬೆಂಗಳೂರು, ಜೂ. 18: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಉಳಿಯಬೇಕೆಂದರೆ ಜೂ.20ರೊಳಗೆ ವಾಲ್ಮೀಕಿ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಚನ್ನಗಿರಿ ವಾಲ್ಮೀಕಿ ಗುರುಪೀಠದ ರಾಮಲಿಂಗ ಸ್ವಾಮೀಜಿ, ಮೈತ್ರಿಕೂಟ ಸರಕಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ. ಸಮುದಾಯಕ್ಕೆ ಸಚಿವ ಸ್ಥಾನವನ್ನು ನೀಡಲೇಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿದ್ದ ವಾಲ್ಮೀಕಿ ಮಹಾಸಭಾ ರಾಜ್ಯಾಧ್ಯಕ್ಷ ಎಂ.ನರಸಿಂಹಯ್ಯ ಮಾತನಾಡಿ, ವಾಲ್ಮೀಕಿ ಸಮಾಜದ ಶಾಸಕರಿಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಅಲ್ಲದೆ, ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪನವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸದಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಮುದಾಯ ಮತ್ತಷ್ಟು ದೂರವಾಗಲಿದೆ ಎಂದು ಎಚ್ಚರಿಸಿದ ಅವರು, ಸತೀಶ್ ಜಾರಕಿಹೊಳಿ ಮತ್ತು ಉಗ್ರಪ್ಪನವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಕೋರಿದರು.

ಅಲ್ಲದೆ, ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕದಲ್ಲೂ ವಾಲ್ಮೀಕಿ ಸಮಾಜದ ಶಾಸಕರನ್ನು ಪರಿಗಣಿಸಬೇಕು ಎಂದ ಅವರು, ಜೆಡಿಎಸ್ ಪಕ್ಷದಲ್ಲಿಯೂ ಸಮುದಾಯದ ಶಾಸಕರಿದ್ದೂ ಅವರಿಗೆ ಸ್ಥಾನಮಾನ ನೀಡಬೇಕೆಂದು ಆ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ವಾಲ್ಮೀಕಿ ಸಮುದಾಯದ ಮಠಗಳ ಸ್ವಾಮೀಜಿಗಳು, ವಾಲ್ಮೀಕಿ ಮಹಾಸಭಾದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News