ಬೆಂಗಳೂರು: ಗುಂಡು ಹಾರಿಸಿ ಸರಗಳ್ಳತನ ಆರೋಪಿಯ ಬಂಧನ
ಬೆಂಗಳೂರು, ಜೂ.18: ಬೈಕ್‌ನಲ್ಲಿ ಬಂದು ಕ್ಷಣಮಾತ್ರದಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿ ಬಂಧಿಸುವಲ್ಲಿ ನಗರ ಪಶ್ವಿಮ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಂಬಳಗೋಡಿನ ನಿವಾಸಿ ಅಚ್ಚುತ್ ಕುಮಾರ್(31) ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ 70ಕ್ಕೂ ಅಧಿಕ ಸರಗಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿಗೆ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸರಗಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತ ರವಿ ಡಿ.ಚನ್ನಣ್ಣವರ್ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚನೆ ಮಾಡಿದ್ದರು.
ರವಿವಾರ ರಾತ್ರಿ ವಿಶೇಷ ತಂಡದ ಸದಸ್ಯ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಚಂದ್ರಕುಮಾರ್ ಗಸ್ತು ತಿರುಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿ ಮೇಲೆ ಅನುಮಾನಗೊಂಡು ಹಿಂಬಾಲಿಸಿ, ಹಿಡಿಯಲು ಮುಂದಾದಾಗ ಬೈಕ್ ಸವಾರ ತನ್ನ ಬಳಿಯಿದ್ದ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಬಳಿಕ ಗಸ್ತಿನಲ್ಲಿದ್ದ ಇತರ ಪೊಲೀಸರಿಗೆ ಮಾಹಿತಿ ನೀಡಿದ ಚಂದ್ರಕುಮಾರ್, ಸಿಬ್ಬಂದಿಯೊಂದಿಗೆ ಆರೋಪಿ ಅಚ್ಚುತ್‌ಕುಮಾರ್‌ನನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಗುಂಡೇಟು: ಆರೋಪಿಯನ್ನು ಸೋಮವಾರ ಮುಂಜಾನೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಬೈಕ್‌ನಲ್ಲಿ ಬಂದು ಮಹಿಳೆಯರ ಸರ ಅಪಹರಣ ಮಾಡುತ್ತಿದ್ದ ಬಗ್ಗೆ ಬಾಯಿಬಿಟ್ಟಿದ್ದಾನೆ. ಬಳಿಕ ಹೆಚ್ಚಿನ ಮಾಹಿತಿಗೆ ಕುಂಬಳಗೋಡಿಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೂತ್ರ ವಿಸರ್ಜನೆಗೆ ಹೋಗುವುದಾಗಿ ಕತ್ತಲಲ್ಲಿ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.
ಕೂಡಲೇ ಸುತ್ತಮುತ್ತಲ ಪ್ರದೇಶಗಳಲ್ಲಿ ನಾಕಾಬಂದಿ ಮಾಡಿದ ಪಶ್ಚಿಮ ವಿಭಾಗದ ಪೊಲೀಸರು ಪರಾರಿಯಾಗಿದ್ದ ಆರೋಪಿ ಅಚ್ಚುತ್‌ಕುಮಾರ್ ಬಂಧನಕ್ಕೆ ಜಾಲ ಬೀಸಿದ್ದರು. ಬೆಳಗ್ಗೆ 5: 40ರ ಸುಮಾರಿಗೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಬನಶಂಕರಿ 6ನೆ ಸ್ಟೇಜ್ ಬಳಿ ಕಾಣಿಸಿಕೊಂಡ ಆರೋಪಿಯನ್ನು ಎಎಸ್ಸೈ ವೀರಭದ್ರಯ್ಯ ಅವರು ಹಿಡಿಯಲು ಯತ್ನಿಸಿದಾಗ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಮುಂದಾಗಿದ್ದ, ಅಲ್ಲದೆ ಶರಣಾಗುವಂತೆ ಸೂಚಿಸಿದರೂ ಕಲ್ಲುಗಳನ್ನು ಪೊಲೀಸರತ್ತ ತೂರಿ ಪರಾರಿಯಾಗಲು ಯತ್ನಿಸಿದ.
ಈ ವೇಳೆ ಪಿಎಸ್ಸೈ ಪ್ರವೀಣ್ ಯಲಿಗಾರ್, ಪೊಲೀಸ್ ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಅಚ್ಚುತ್‌ಕುಮಾರ್‌ನ ಬಲಗಾಲಿಗೆ ತಗುಲಿ ಕುಸಿದುಬಿದ್ದ ಕೂಡಲೇ ಆಸ್ಪತ್ರೆಗೆ ದಾಖಲಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಖ್ಯಪೇದೆಗೆ ಬಹುಮಾನ
ಸರಗಳ್ಳನ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜ್ಞಾನಭಾರತಿ ಠಾಣೆಯ ಮುಖ್ಯಪೇದೆ ಚಂದ್ರಕುಮಾರ್ ಅವರ ಕಾರ್ಯವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಪ್ರಶಂಸಿಸಿ 1 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.