ಗೌರಿ, ಕಲಬುರ್ಗಿ ಕೊಲೆಗೆ ಲಿಂಗಾಯತ ಸ್ವತಂತ್ರ ಧರ್ಮ ಬೆಂಬಲಿಸಿದ್ದೇ ಕಾರಣವೆ?

Update: 2018-06-19 05:24 GMT

ದಿ. ಹೇಮಂತ್ ಕರ್ಕರೆ ಅವರ ನೇತೃತ್ವದ ತಂಡ ಮಾಲೆಗಾಂವ್, ಮಕ್ಕಾ ಮಸೀದಿ ಸ್ಫೋಟಗಳ ತನಿಖೆಯನ್ನು ಮಾಡುತ್ತಾ, ಈ ದೇಶದಲ್ಲಿ ಹರಡಿರುವ ಕೇಸರಿ ಉಗ್ರಗಾಮಿಗಳ ಹುತ್ತಗಳನ್ನು ಮೊದಲ ಬಾರಿಗೆ ಕೆದಕಿತು. ಮತ್ತು ಅದೇ ಹುತ್ತದೊಳಗಿನ ಹಾವುಗಳಿಗೆ ಅವರು ಬಲಿಯಾದರೆ ಎಂಬ ಶಂಕೆ ದೇಶದ ಹಲವರಲ್ಲಿ ಇಂದಿಗೂ ಉಳಿದಿದೆ. ಇದೀಗ ಅದೇ ದಾರಿಯಲ್ಲಿ ಗೌರಿ ಹತ್ಯೆ ತನಿಖೆಯೂ ಸಾಗುತ್ತಿದೆ. ಗೌರಿಲಂಕೇಶ್ ಹತ್ಯೆಯ ತನಿಖೆೆ ಭಾಗಶಃ ಯಶಸ್ವಿಯಾಗಿದೆ. ಕೊಲೆಯಲ್ಲಿ ನೇರವಾಗಿ ಪಾತ್ರವಹಿಸಿದ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ಆತ ಗೌರಿ ಲಂಕೇಶ್‌ರನ್ನು ಕೊಲ್ಲಲು ಕಾರಣವೇನು ಎನ್ನುವುದೂ ಮಾಧ್ಯಮಗಳಲ್ಲಿ ವರದಿಯಾಗಿವೆ. ಪರಶುರಾಮ್ ವಾಗ್ಮೋರೆ ಸೇರಿದಂತೆ ಇದರಲ್ಲಿ ಪಾಲುಗೊಂಡವರು ಹಿಂದೂ ಧರ್ಮ ಅಥವಾ ದೇಶದ ಮೇಲೆ ಯಾವುದೇ ಪ್ರೀತಿಯನ್ನು ಹೊಂದಿದವರಲ್ಲ. ಅವರ ಅಂತಿಮ ಉದ್ದೇಶ ದೇಶದ ಸ್ವಾಸ್ಥವನ್ನು ಕೆಡಿಸುವುದು. ಈ ಕಾರಣಕ್ಕಾಗಿಯೇ ಈ ತಂಡ ಸಿಂಧಗಿಯಲ್ಲಿ ಪಾಕಿಸ್ತಾನದ ಧ್ಜಜವನ್ನು ಹಾರಿಸಿ ಅದನ್ನು ಮುಸ್ಲಿಮರ ತಲೆಗೆ ಕಟ್ಟಲು ನೋಡಿತ್ತು. ಆ ಮೂಲಕ ಕೋಮುದ್ವೇಷವನ್ನು ನಾಡಿನಾದ್ಯಂತ ಹರಡುವುದು ಅವರ ಉದ್ದೇಶವಾಗಿತ್ತು. ಈ ದೇಶದ ಮೇಲೆ ಪ್ರೀತಿಯಿರುವ ಯಾವನೇ ವ್ಯಕ್ತಿ, ಪಾಕಿಸ್ತಾನದ ಧ್ವಜವನ್ನು ತನ್ನದೇ ನೆಲದ ಮೇಲೆ ಹಾರಿಸಲು ಸಾಧ್ಯವಿಲ್ಲ.

ಇದೇ ರೀತಿಯಲ್ಲಿ, ಮೇಲ್ನೋಟಕ್ಕೆ ಗೌರಿಯವರ ಹತ್ಯೆ, ಹಿಂದೂ ಧರ್ಮದ ಮೇಲಿನ ಅಭಿಮಾನದಿಂದ ಮಾಡಿರುವುದೆಂದು ಭಾಸವಾದರೂ, ಕೊಲೆಗೈದವರಿಗೆ ಹಿಂದೂ ಧರ್ಮದ ಬಗ್ಗೆ ವಿಶೇಷ ತಿಳುವಳಿಕೆಗಳೇ ಇಲ್ಲ. ಕೊಲೆಗಾರನಿಗೆ ಗೌರಿ ಲಂಕೇಶರ ಪರಿಚಯವೇ ಇಲ್ಲ ಎಂದ ಮೇಲೆ, ಆತ ಆಕೆಯ ವಿರುದ್ಧ ದ್ವೇಷವನ್ನು ಹೊಂದುವುದು ದೂರದ ಮಾತು. ಮುಖ್ಯವಾಗಿ ಆತ ಕ್ರಿಮಿನಲ್ ಚಟುವಟಿಕೆಗಳಲ್ಲಿ ಈ ಹಿಂದೆಯೇ ಗುರುತಿಸಿಕೊಂಡವನು. ಅವನಿಗೆ ಗೌರಿ ಹತ್ಯೆಯ ಸುಪಾರಿಯನ್ನು ನೀಡಲಾಗಿದೆ. ಅದರ ಜೊತೆಗೆ ಆತನಿಗೆ ಗೌರಿ ಲಂಕೇಶರ ಕುರಿತಂತೆ ಅವನ ತಲೆಯಲ್ಲಿ ದ್ವೇಷವನ್ನು ತುಂಬಲಾಗಿದೆ ಮತ್ತು ಆ ದ್ವೇಷವನ್ನೇ ಹಿಂದೂ ಧರ್ಮದ ಮೇಲಿನ ಪ್ರೀತಿ ಎಂದು ನಂಬಿಸಲಾಗಿದೆ. ಹಣದ ಆಮಿಷ ಮತ್ತು ದ್ವೇಷ ಇವೆರಡನ್ನೂ ಬಳಸಿಕೊಂಡು ವಾಗ್ಮೋರೆಯನ್ನು ಕೊಲೆ ಕೃತ್ಯಕ್ಕೆ ಬಳಸಿಕೊಳ್ಳಲಾಗಿದೆ. ಮುಖ್ಯವಾಗಿ ಕೊಲೆಗೈದಾತನಿಗೂ ಕೊಲೆಗೆ ಸಂಚು ರೂಪಿಸಿದವರಿಗೂ ಮಹಾರಾಷ್ಟ್ರದ ಸಂಬಂಧವಿರುವುದು ಬೆಳಕಿಗೆ ಬಂದಿದೆ. ಈ ಹತ್ಯೆ ಖಂಡಿತವಾಗಿಯೂ ಈ ಪ್ರಜಾಸತ್ತಾತ್ಮಕವಾದ ಭಾರತ ದೇಶವನ್ನು ದ್ವೇಷಿಸುವ ಉಗ್ರವಾದಿ ಗುಂಪಿನಿಂದ ನಡೆದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಗೌರಿ ಹತ್ಯೆ ತನಿಖೆ ಈ ದೇಶದಲ್ಲಿ ಹರಡಿರುವ ಕೇಸರಿ ಭಯೋತ್ಪಾದಕರ ಜಾಲದ ಬಗ್ಗೆ ಇನ್ನಷ್ಟು ವಿವರಗಳನ್ನು ಹೊರಗೆಡಹಿದೆ.

 ಗೌರಿ ಹತ್ಯೆಯ ತನಿಖೆಯ ಜಾಡಿನಲ್ಲೇ ಮುಂದೆ ಸಾಗಿದರೆ ಕಲಬುರ್ಗಿಯವರನ್ನು ಹತ್ಯೆ ಮಾಡಿದ ಕೊಲೆಗಾರರು ಮತ್ತು ಸಂಚು ರೂಪಿಸಿದವರ ಬಚ್ಚಿಟ್ಟುಕೊಂಡಿರುವ ಹುತ್ತಗಳನ್ನು ತಲುಪುವ ಸಾಧ್ಯತೆಗಳಿವೆ. ‘ಸುಪಾರಿ ಕೊಲೆಗಾರರು’ ಹಲವರಿರಬಹುದು. ಆದರೆ, ವಾಗ್ಮೋರೆಗೆ ಕೊಲೆಗೈಯಲು ನಿರ್ದೇಶನ ನೀಡಿದ ವ್ಯಕ್ತಿ ಅಥವಾ ಸಂಘಟನೆ ಒಂದೇ ಆಗಿದೆ. ಕಲಬುರ್ಗಿಯವರು ಮತ್ತು ಗೌರಿ ಲಂಕೇಶ್ ಈ ರಾಜ್ಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮವಾಗುವುದಕ್ಕೆ ಬಹಳಷ್ಟು ಸೈದ್ಧಾಂತಿಕ ಕೊಡುಗೆಗಳನ್ನು ನೀಡಿದ್ದಾರೆ. ಕಲಬುರ್ಗಿಯ ಸಂಶೋಧನೆಗಳೇ ಲಿಂಗಾಯತ ಧರ್ಮ ಮತ್ತು ವೈದಿಕ ಧರ್ಮ ಬೇರೆ ಬೇರೆ ಎನ್ನುವುದನ್ನು ನಾಡಿಗೆ ಸ್ಪಷ್ಟ ಪಡಿಸಿತು. ಬಸವಣ್ಣನ ಅನುಯಾಯಿಗಳಿಗೆ ಅವರು ಅಸ್ಮಿತೆಯನ್ನು ಎತ್ತಿ ತೋರಿಸಿಕೊಟ್ಟಿತು. ಲಿಂಗಾಯತ ಧರ್ಮ ಆಂದೋಲನ ಆರಂಭವಾದಾಗ ಅದರ ಬೆನ್ನಿಗೆ ನಿಂತವರಲ್ಲಿ ಗೌರಿ ಲಂಕೇಶ್ ಕೂಡ ಮುಖ್ಯರು. ಇವರಿಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದ ಚಿಂತಕರು ಎನ್ನುವುದು ಕೂಡ ಮುಖ್ಯವಾಗಿದೆ.

ಲಿಂಗಾಯತ ಧರ್ಮ ಆಂದೋಲನದಿಂದ ಈ ದೇಶದ ಕೇಸರಿ ಹಿಂದುತ್ವವಾದಿ ಸಂಘಟನೆಗಳು ಕಂಗೆಟ್ಟಿದ್ದವು. ಲಿಂಗಾಯತ ತತ್ವ ಮುನ್ನೆಲೆಗೆ ಬಂದರೆ, ಆರೆಸ್ಸೆಸ್‌ನ ಚಿಂತನೆಗೆ ಭಾರೀ ಧಕ್ಕೆಯಾಗಲಿದೆ ಎನ್ನುವುದು ಅವರಿಗೆ ತಿಳಿದಿತ್ತು. ಜಾತಿ ವ್ಯವಸ್ಥೆಯನ್ನು, ವಿಗ್ರಹಾರಾಧನೆಯನ್ನು, ಬ್ರಾಹ್ಮಣ್ಯವನ್ನು ವಿರೋಧಿಸಿ 12ನೇ ಶತಮಾನದಲ್ಲಿ ಬಸವಣ್ಣನ ಲಿಂಗಾಯತ ಧರ್ಮ ಹುಟ್ಟು ಹಾಕಿದಾಗ ಅದನ್ನು ನಾಶ ಪಡಿಸಲು ಹವಣಿಸಿದ ಚಿಂತನೆಗಳನ್ನೇ ಇಂದು ಕಲಬುರ್ಗಿ ಮತ್ತು ಗೌರಿ ಲಂಕೇಶರನ್ನು ಕೊಂದು ಹಾಕಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

ಲಿಂಗಾಯತ ಸ್ವತಂತ್ರ ಧರ್ಮವಾಗಿ ಅದು ಎಲ್ಲ ಜಾತಿ, ಮಠ, ಸ್ವಾಮೀಜಿಗಳನ್ನು ದೂರ ತಳ್ಳಿ ಬಸವಣ್ಣನ ದಾರಿಯಲ್ಲಿ ಮುನ್ನಡೆದರೆ ಹಿಂದುತ್ವ ಉಗ್ರವಾದಿ ಚಿಂತನೆ ಕರ್ನಾಟಕ ಸೇರಿದಂತೆ ಇಡೀ ದಕ್ಷಿಣ ಭಾರತದಲ್ಲಿ ನೆಲೆ ಕಳೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಲಿಂಗಾಯತ ಧರ್ಮವನ್ನು ಬಹಿರಂಗವಾಗಿ ಬೆಂಬಲಿಸುವ ಚಿಂತಕರ ಮೇಲೆಯೇ ನೇರ ದಾಳಿ ನಡೆದಿದೆ. ಹಾಗೆಯೇ ಲಿಂಗಾಯತ ಧರ್ಮದ ನೇತೃತ್ವವನ್ನು ವಹಿಸಿದ ರಾಜಕಾರಣಿಗಳನ್ನು ಕೊಂದು ಹಾಕುವ ಸಂಚು ಕೂಡ ಬೆಳಕಿಗೆ ಬಂದಿವೆ. ಈ ಎಲ್ಲ ಕಾರಣಗಳಿಂದ, ಗೌರಿಲಂಕೇಶ್ ಹತ್ಯೆಯ ಸಂಚು ರೂಪಿಸಿದ ಸಂಘಟನೆ ಅಥವಾ ಆ ಸಂಘಟನೆಯ ಮುಖ್ಯಸ್ಥರ ಕೈವಾಡ ಕಲಬುರ್ಗಿಯವರ ಕೊಲೆಯಲ್ಲೂ ಇರುವ ಸಾಧ್ಯತೆಗಳಿವೆ. ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ಇನ್ನೂ ತೀವ್ರವಾಗಿ, ಪ್ರಾಮಾಣಿಕವಾಗಿ ಮುಂದುವರಿಸಿದರೆ, ಮಹಾರಾಷ್ಟ್ರ, ಕರ್ನಾಟಕ, ಗೋವಾ ಸೇರಿದಂತೆ ದಕ್ಷಿಣ ಭಾರತದಲ್ಲಿ ಹರಡಿರುವ ಕೇಸರಿ ಉಗ್ರಗಾಮಿ ಸಂಘಟನೆಗಳ ವಿವರಗಳು ಬಹಿರಂಗವಾಗಲಿವೆ.

ಗೌರಿ ಹತ್ಯೆ ಮಾಡಿದಾತನ ಹೆಸರು ಬಿಡುಗಡೆಯಾಗುತ್ತಿರುವಂತೆಯೇ, ರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್, ರೇಬಿಸ್ ರೋಗ ಅಂಟಿಸಿಕೊಂಡವನಂತೆ ಪತ್ರಿಕಾಗೋಷ್ಠಿಯಲ್ಲಿ ವದರಾಡುತ್ತಿದ್ದಾನೆ. ಹತ್ಯೆಗೀಡಾದ ಚಿಂತಕರನ್ನು ನಾಯಿಗೆ ಹೋಲಿಸಿಹೇಳಿಕೆ ನೀಡಿದ್ದಾನೆ. ಈಗಾಗಲೇ ಗೋವಾದಲ್ಲಿ ನಿಷೇಧಕ್ಕೊಳಗಾಗಿರುವ ಈತನಿಗೂ, ಗೌರಿ ಹತ್ಯೆಗೂ ಇರುವ ಸಂಬಂಧಗಳ ಕುರಿತಂತೆ ತನಿಖೆ ನಡೆಸುವ ಅಗತ್ಯವನ್ನು ಈತನ ಸಂಸ್ಕಾರಹೀನ ಹೇಳಿಕೆಗಳೇ ಹೇಳುತ್ತವೆ. ಈ ಹಿಂದೆ ಜಂಬಗಿ ಮತ್ತು ಆತನ ಭಂಟರ ಬಂಧನವಾದಾಗ ತನಗೂ ಆರೋಪಿಗಳಿಗೆ ಸಂಬಂಧವಿಲ್ಲ ಎಂದು ಮಾಧ್ಯಮಗಳಲ್ಲಿ ಚೀರಾಡಿದ್ದ. ಆದರೆ ಜಂಬಗಿಯ ಜೊತೆಗೆ ಈತನಿದ್ದ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಗೌರಿ ಹತ್ಯೆ ಆರೋಪಿ ವಾಗ್ಮೋರೆಯ ವಿಷಯದಲ್ಲೂ ಇದು ಪುನರಾವರ್ತನೆಯಾಗುತ್ತಿದೆ. ವಾಗ್ಮೋರೆ ಮುತಾಲಿಕ್‌ನೊಂದಿಗಿರುವ ಚಿತ್ರಗಳೂ ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ. ಆದರೆ ಇನ್ನೂ ಮುತಾಲಿಕ್‌ನ ಬಂಧನವಾಗಿಲ್ಲ. ಗೋವಾದಲ್ಲಿ ಬಿಜೆಪಿ ಸರಕಾರಕ್ಕೆ ಸಾಧ್ಯವಾದದ್ದು ಕರ್ನಾಟಕದಲ್ಲಿರುವ ಜಾತ್ಯತೀತ ಸರಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ? ಮುತಾಲಿಕ್‌ನ ಬಂಧನ ಅಥವಾ ಆತನ ಗಡಿಪಾರು ಮಾಡದಂತೆ ಸರಕಾರವನ್ನು ತಡೆಯುತ್ತಿರುವ ಕೈಗಳು ಯಾವುವು? ಕನ್ನಡ ಸಂಸ್ಕೃತಿ, ಪರಂಪರೆಗೆ ಸವಾಲೊಡ್ಡುತ್ತಿರುವ ಉಗ್ರವಾದಿ ಶಕ್ತಿಗಳನ್ನು ನಿಯಂತ್ರಿಸಲು ಯಾಕೆ ಸರಕಾರ ಹಿಂಜರಿಕೆ ತೋರಿಸುತ್ತಿದೆ? ಜಾತ್ಯತೀತ ನಾಯಕರು ಈ ಪ್ರಶ್ನೆಗಳಿಗೆ ಉತ್ತರಿಸಲೇ ಬೇಕಾದ ಸಂದರ್ಭ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News