ಮಡೇರಾ ಏರ್‌ಪೋರ್ಟ್‌ನಲ್ಲಿ ರೊನಾಲ್ಡೊ ಪ್ರತಿಮೆ ಬದಲಾವಣೆ

Update: 2018-06-18 18:54 GMT

ಮ್ಯಾಡ್ರಿಡ್, ಜೂ.18: ಕಳೆದ ವರ್ಷ ವಿಶ್ವವ್ಯಾಪಿ ಗಮನ ಸೆಳೆದಿದ್ದ ಮಡೇರಾ ಏರ್‌ಪೋರ್ಟ್‌ನಲ್ಲಿ ಸ್ಥಾಪಿಸಲಾಗಿದ್ದ ಪೋರ್ಚುಗಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊರ ಕಂಚಿನ ಪ್ರತಿಮೆಯನ್ನು ಬದಲಾಯಿಸಲಾಗಿದೆ.

2017ರಲ್ಲಿ ರೊನಾಲ್ಡೊಗೆ ಗೌರವ ನೀಡುವ ಸಲುವಾಗಿ ಏರ್‌ಪೋರ್ಟ್‌ಗೆ ಮರು ನಾಮಕರಣ ಮಾಡಲಾಗಿತ್ತು. ಈ ವೇಳೆ ಇಮಾನುಯೆಲ್ ಸ್ಯಾಂಟೊಸ್ ಎಂಬುವವರು ನಿರ್ಮಿಸಿದ್ದ ರೊನಾಲ್ಡೊ ಪ್ರತಿಮೆಯನ್ನು ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗಿತ್ತು.

ಏರ್‌ಪೋರ್ಟ್‌ನಲ್ಲಿ ಪ್ರತಿಮೆ ಅನಾವರಣಗೊಳಿಸಿದ ಬೆನ್ನಿಗೇ ಪ್ರತಿಮೆಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರತಿಮೆಯು ಫುಟ್ಬಾಲ್ ಸೂಪರ್‌ಸ್ಟಾರ್‌ನ್ನು ಹೋಲುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಇದೀಗ ಮರು ಸ್ಥಾಪಿಸಲಾಗಿರುವ ಪ್ರತಿಮೆಯು 33ರ ಹರೆಯದ ಸೂಪರ್‌ಸ್ಟಾರ್ ರೊನಾಲ್ಡೊರ ಪ್ರತಿರೂಪದಂತಿದೆ. ರೊನಾಲ್ಡೊರ ಕುಟುಂಬ ಸದಸ್ಯರ ಕೋರಿಕೆಯ ಮೇರೆಗೆ ಪ್ರತಿಮೆಯನ್ನು ಬದಲಿಸಲಾಗಿದೆ ಎಂದು ಮಡೇರಾ ಐಲ್ಯಾಂಡ್ ನ್ಯೂಸ್ ವರದಿ ಮಾಡಿದೆ.

ಈ ಹಿಂದೆ ಸ್ಥಾಪಿಸಲಾಗಿದ್ದ ರೊನಾಲ್ಡೊ ಪ್ರತಿಮೆಯು ಎಫ್1 ಚಾಲಕ ಡೇವಿಡ್ ಕೌಲ್ಟ್‌ಹಾರ್ಡ್ ಹಾಗೂ ಸಂಡರ್‌ಲ್ಯಾಂಡ್ ಸ್ಟ್ರೈಕರ್ ನಿಯಾಲ್ ಕ್ವಿನ್‌ರನ್ನು ಹೋಲುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News