ಮೌಢ್ಯಾಚರಣೆ ವಿರುದ್ಧ ಹೋರಾಡುತ್ತಿರುವ ಸತೀಶ್ ಜಾರಕಿಹೊಳಿ ಪೆರಿಯಾರ್‌ರಂತೆ ರೂಪುಗೊಳ್ಳಲಿ: ಎ.ಕೆ.ಸುಬ್ಬಯ್ಯ

Update: 2018-06-19 14:13 GMT

ಬೆಂಗಳೂರು, ಜೂ.19: ಮೌಢ್ಯಾಚರಣೆ ವಿರುದ್ಧ ದಿಟ್ಟವಾಗಿ ಹೋರಾಟ ಮಾಡುತ್ತಿರುವ ಶಾಸಕ ಸತೀಶ್ ಜಾರಕಿಹೊಳಿ ದೇಶದಲ್ಲಿ ಪೆರಿಯಾರ್‌ರಂತೆ ರೂಪುಗೊಳ್ಳಬೇಕಾದ ಅಗತ್ಯವಿದೆ ಎಂದು ಹಿರಿಯ ವಿಚಾರವಾದಿ ಎ.ಕೆ.ಸುಬ್ಬಯ್ಯ ಆಶಿಸಿದರು.

ಮಂಗಳವಾರ ಮಾನವ ಬಂಧುತ್ವ ವೇದಿಕೆ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯಕ್ಕಾಗಿ ಜನಾಗ್ರಹ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿಯ ವರ್ಚಸ್ಸು ಹಾಗೂ ವ್ಯಕ್ತಿತ್ವವನ್ನು ಮಂತ್ರಿ ಸ್ಥಾನದಿಂದ ರೂಪಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಹೀಗಾಗಲೇ ಅವರು ಮೌಢ್ಯಾಚರಣೆ ವಿರುದ್ಧ ಪ್ರಬಲವಾಗಿ ಹೋರಾಟ ಮಾಡುವುದರ ಮೂಲಕ ಜನನಾಯಕರಾಗಿ ರೂಪಗೊಂಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೀರಶೈವ ಮಠಗಳ ಸಂಚು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಉರುಳಿಸಲು ಬಿಜೆಪಿ ಮತ್ತು ವೀರಶೈವ ಮಠಗಳು ಷಡ್ಯಂತ್ರ ರೂಪಿಸುತ್ತಿವೆ. ಇದಕ್ಕೆ ಕಾಂಗ್ರೆಸ್‌ನ ಅತೃಪ್ತ ಶಾಸಕರು ಅವಕಾಶ ಮಾಡಿಕೊಡದೆ, ಸಮ್ಮಿಶ್ರ ಸರಕಾರ ಐದು ವರ್ಷ ಯಾವುದೇ ಆತಂಕವಿಲ್ಲದೆ ಅಧಿಕಾರ ನಡೆಸಲು ಅನುವು ಮಾಡಿಕೊಡಬೇಕೆಂದು ಅವರು ಮನವಿ ಮಾಡಿದರು.

ಎಸ್‌ಐಟಿ ರದ್ದು: ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ, ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಮೂಲೆಗುಂಪು ಮಾಡುತ್ತಿದ್ದರಲ್ಲದೆ, ವಿಶೇಷ ತನಿಖಾ ದಳ(ಎಸ್‌ಐಟಿ) ರದ್ದು ಮಾಡುತ್ತಿದ್ದರು. ಇತ್ತೀಚಿಗೆ ಉಡುಪಿಯಲ್ಲಿ ನಡೆದ ಹುಸೇನಬ್ಬ ಹತ್ಯಾ ಪ್ರಕರಣವನ್ನು ಮುಚ್ಚು ಹಾಕುತ್ತಿದ್ದರು. ಆ ಮೂಲಕ ರಾಜ್ಯದಲ್ಲಿ ಜಾತ್ಯತೀತ ಮೌಲ್ಯಗಳನ್ನು ಮಣ್ಣು ಪಾಲು ಮಾಡುತ್ತಿದ್ದರು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ರಾಜ್ಯಪಾಲರ ಕಚೇರಿ ಆರೆಸ್ಸೆಸ್ ಶಾಖೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಬಿಜೆಪಿಗೆ ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿಯುವಂತೆ ರಾಜ್ಯಪಾಲ ವಜುಬಾಯಿ ವಾಲಾ ಸಹಕರಿಸಿ ಆರೆಸ್ಸೆಸ್ ಎಜೆಂಟ್‌ರಂತೆ ವರ್ತಿಸಿದ್ದರು. ಆದರೆ, ಸುಪ್ರೀಂ ಕೋರ್ಟ್ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲವೆಂದು ಅವರು ಹೇಳಿದರು.

ಸಾಮಾಜಿಕ ನ್ಯಾಯದ ಪರಿಪಾಲನೆಯಲ್ಲಿ ಮಾದರಿಯಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚುಸ್ಸು ಇಂದಿಗೂ ಆಕಾಶದೆತ್ತರಕ್ಕೆ ಬೆಳೆದಿದೆ. ತಮ್ಮ ಸಚಿವ ಸಂಪುಟದಲ್ಲಿ ಎಲ್ಲ ಜಾತಿ ಸಮುದಾಯಕ್ಕೆ ಸಮಾನ ಅವಕಾಶ ಮಾಡಿಕೊಟ್ಟಿದ್ದರು. ಈಗಲೂ ಕಾಂಗ್ರೆಸ್‌ನ 22 ಸಚಿವರನ್ನು ಸಾಮಾಜಿಕ ನ್ಯಾಯದ ಆಧಾರದಲ್ಲಿಯೇ ಆಯ್ಕೆ ಮಾಡಲಾಗಿದೆ ಎಂದು ಅವರು ಅಭಿಪ್ರಾಯಿಸಿದರು.

ವಿಧಾನ ಪರಿಷತ್‌ನ ಸದಸ್ಯೆ ಜಯಮಾಲಾರನ್ನು ವಿಶೇಷ ಆದ್ಯತೆ ಮೇರೆಗೆ ಸಚಿವೆಯನ್ನಾಗಿ ಮಾಡಿದ್ದು ಕಾಂಗ್ರೆಸ್‌ನ ಸಾಮಾಜಿಕ ನ್ಯಾಯದ ಉದಾಹರಣೆಯಾಗಿದೆ. ಹಿಂದುಳಿದ ಜಾತಿ ಹಾಗೂ ಮಹಿಳಾ ಪ್ರಾತಿನಿಧ್ಯಕ್ಕಾಗಿ ಜಯಮಾಲಾರ ಆಯ್ಕೆ ಸೂಕ್ತವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಗೀತಾ ಮಾತನಾಡಿ, ಡಾ.ಬಿ.ಅರ್.ಅಂಬೇಡ್ಕರ್ ಕಲ್ಪಿಸಿದ ಮೀಸಲಾತಿಯಿಂದಾಗಿ ಅನಿವಾರ್ಯವಾಗಿ ಮಹಿಳೆಗೆ ಅಲ್ಪಸ್ವಲ್ಪ ಸ್ಥಾನಮಾನಗಳನ್ನು ನೀಡಲಾಗುತ್ತಿದೆ. ಆದರೆ, ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಸಮುದಾಯವನ್ನು ಬದಿಗೆ ಸರಿಸಲಾಗಿದೆ. ಕೇವಲ ಅನುಕಂಪದ ಆಧಾರದಲ್ಲಿ ಒಂದೆರಡು ಸ್ಥಾನಗಳನ್ನು ನೀಡುವ ಮೂಲಕ ನಿರ್ಲಕ್ಷಿಸಲಾಗುತ್ತಿದೆ ಎಂದು ವಿಷಾದಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಸೋಲುಂಡಿರುವುದಕ್ಕೆ ಕಾಂಗ್ರೆಸ್, ಜೆಡಿಎಸ್‌ನ ಹೆಚ್ಚುಗಾರಿಕೆ ಏನಿಲ್ಲ. ಪ್ರಗತಿಪರರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತ ಸಮುದಾಯದ ಕಾರ್ಯಕರ್ತರು ಬಿಜೆಪಿಯ ಅಪಾಯಕಾರಿ ಸಿದ್ಧಾಂತದ ಕುರಿತು ಜನತೆಗೆ ಮನವರಿಕೆ ಮಾಡಿಕೊಟ್ಟಿದ್ದ ಪರಿಣಾಮವಾಗಿ ಇವತ್ತು ಬಿಜೆಪಿಯೇತರ ಸರಕಾರ ಅಧಿಕಾರ ನಡೆಸುತ್ತಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಜನತೆಯ ಮೇಲೆ ಕೃತಜ್ಞತೆಯಿರಲಿ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ಮಟ್ಟು, ದಸಂಸ ಸಂಚಾಲಕ ಮಾವಳ್ಳಿ ಶಂಕರ್, ಲಕ್ಷ್ಮಿ ನಾರಾಯಣ ನಾಗವಾರ, ಅಣ್ಣಯ್ಯ, ಮೋಹನ್‌ ರಾಜ್, ಅಂಬೇಡ್ಕರ್‌ ವಾದಿ ಪ್ರೊ.ಮಹೇಶ್‌ ಚಂದ್ರಗುರು, ಮಾವನ ಬಂಧುತ್ವ ವೇದಿಕೆಯ ಸಂಚಾಲಕ ಅನಂತ ನಾಯಕ್ ಮತ್ತಿತರರಿದ್ದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಹೋಮ ಮಾಡಿಸುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್‌ಗೆ ದ್ರೋಹ ಮಾಡಿದ್ದಾರೆ. ಮನುವಾದಿಗಳ ಗುಲಾಮರಂತೆ ವರ್ತಿಸುವ ಯಾರೊಬ್ಬರಿಗೂ ಅಂಬೇಡ್ಕರ್ ಹೆಸರಿನಲ್ಲಿ ಅಧಿಕಾರಿ ನಡೆಸುವ ಯೋಗ್ಯತೆಯಿಲ್ಲ.
-ಎ.ಕೆ.ಸುಬ್ಬಯ್ಯ ವಿಚಾರವಾದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News