ವಕ್ಫ್ ಆಸ್ತಿ ಒತ್ತುವರಿ ಮಾಡಿದವರು ಎಷ್ಟೇ ದೊಡ್ಡವರಾಗಿದ್ದರೂ ಮುಲಾಜಿಲ್ಲದೆ ಕ್ರಮ: ಸಚಿವ ಝಮೀರ್‌ ಅಹ್ಮದ್‌ ಖಾನ್

Update: 2018-06-19 14:43 GMT

ಬೆಂಗಳೂರು, ಜೂ.19: ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ಒತ್ತುವರಿಗೆ ಸಂಬಂಧಿಸಿದಂತೆ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‌ ಮಾನಿಪ್ಪಾಡಿ ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಮಂಗಳವಾರ ವಿಕಾಸಸೌಧದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅನ್ವರ್‌ಮಾನಿಪ್ಪಾಡಿ ವರದಿ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು. ವಕ್ಫ್ ಹಾಗೂ ಮುಜರಾಯಿ ಆಸ್ತಿಗಳು ದೇವರ ಆಸ್ತಿಗಳು. ಅನ್ವರ್‌ ಮಾನಿಪ್ಪಾಡಿ ವರದಿಯಲ್ಲಿ ಉಲ್ಲೇಖಿಸಿದಂತೆ ರೋಷನ್‌ಬೇಗ್, ಖಮರುಲ್ ಇಸ್ಲಾಮ್ ವಕ್ಫ್ ಆಸ್ತಿಗಳನ್ನು ಕಬಳಿಸಲಿರಿಕ್ಕಿಲ್ಲ ಎಂಬುದು ನನ್ನ ನಂಬಿಕೆ. ವರದಿಯ ಸತ್ಯಾಸತ್ಯತೆ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

ವಕ್ಫ್ ಆಸ್ತಿಗಳ ಒತ್ತುವರಿಯಲ್ಲಿ ಯಾರೇ, ಎಷ್ಟೇ ದೊಡ್ಡವರಾಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ. ನಾನು ನಿಷ್ಠುರವಾದರೂ ಸರಿ, ಯಾವ ಒತ್ತಡಕ್ಕೂ ಮಣಿಯುವುದಿಲ್ಲ. ಇಲ್ಲಿನ ಒತ್ತಡ ತಾತ್ಕಾಲಿಕ, ದೇವರ ಬಳಿ ಉತ್ತರ ನೀಡಬೇಕೆಂಬ ಶಾಶ್ವತ ಒತ್ತಡ ನನ್ನ ಮೇಲಿರುತ್ತದೆ. ಅಧಿಕಾರ ಶಾಶ್ವತವಲ್ಲ, ದೇವರು ಕೊಟ್ಟಿರುವ ಅವಕಾಶದಲ್ಲಿ ನ್ಯಾಯದ ಪರವಾಗಿ ಕೆಲಸ ಮಾಡಬೇಕಷ್ಟೇ ಎಂದು ಝಮೀರ್‌ಅಹ್ಮದ್ ತಿಳಿಸಿದರು.

ನನ್ನ ಆಸ್ತಿಯನ್ನು ಯಾರಾದರೂ ಕಬಳಿಸಿದ್ದರೆ ಬಿಟ್ಟು ಬಿಡುತ್ತೇನೆ. ಆದರೆ, ವಕ್ಫ್ ಹಾಗೂ ಮುಜರಾಯಿ ಆಸ್ತಿಗಳು ದೇವರ ಆಸ್ತಿಗಳು. ಅದನ್ನು ಸಮುದಾಯಗಳ ಕಲ್ಯಾಣಕ್ಕೆ ದಾನ ನೀಡಿರುತ್ತಾರೆ. ಅಂತಹ ಆಸ್ತಿಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಕಂಡು ಬಂದರೆ, ಅಧಿಕಾರ ಹೋದರೂ ಪರವಾಗಿಲ್ಲ, ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ವಕ್ಫ್‌ಗೆ ಸಂಬಂಧಿಸಿದ ಹಲವಾರು ಪ್ರಮುಖ ಆಸ್ತಿಗಳು ಲಭ್ಯವಿದೆ. ವಿಂಡ್ಸರ್‌ಮ್ಯಾನರ್ ಹೊಟೇಲ್ ಇರುವ ಜಾಗವು ವಕ್ಫ್ ಆಸ್ತಿಯಾಗಿದೆ. ಆದರೆ, ಅವರು ಅತ್ಯಂತ ಕಡಿಮೆ ಬಾಡಿಗೆಯನ್ನು ಪಾವತಿಸುತ್ತಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಸಮರ್ಥವಾಗಿ ವಾದ ಮಂಡನೆ ಮಾಡಲು ವಕೀಲರ ನೇಮಕ ಮಾಡಲಾಗುವುದು. ರಾಜ್ಯ ವಕ್ಫ್ ಬೋರ್ಡ್‌ಗೆ ಶೀಘ್ರವೇ ಚುನಾವಣೆ ನಡೆಸಲಾಗುವುದು ಎಂದು ಝಮೀರ್‌ಅಹ್ಮದ್ ತಿಳಿಸಿದರು.

ಬಿಬಿಎಂಪಿ, ಮೈಸೂರು, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಈಗ ನಾವು ಸರಕಾರದ ಅನುದಾನದ ಮೊರೆ ಹೋಗುತ್ತಿದ್ದೇವೆ. ಆದರೆ, ಈ ಆಸ್ತಿಗಳನ್ನು ಸದ್ಬಳಕೆ ಮಾಡಿಕೊಂಡರೆ ನಾವೇ ಸರಕಾರಕ್ಕೆ ಹಣಕಾಸಿನ ನೆರವು ನೀಡಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳೂರು ಹಾಗೂ ಗುಲ್ಬರ್ಗದಲ್ಲಿ ಹಜ್‌ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ ಅನುದಾನವನ್ನು ಒದಗಿಸಲಾಗಿದೆ. ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ಭೂಮಿಯನ್ನು ಗುರುತಿಸಲಾಗಿತ್ತು. ಆದರೆ, ಅಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಬೇರೆ ಕಡೆ ಜಮೀನು ನೋಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

ರಾಜ್ಯದಿಂದ ಈ ಬಾರಿ ಪವಿತ್ರ ಹಜ್‌ಯಾತ್ರೆಗೆ ತೆರಳಲು 18 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 6624 ಮಂದಿಗೆ ಅವಕಾಶ ಲಭ್ಯವಾಗಿದೆ. ರಾಜ್ಯದಿಂದ ತೆರಳುವ ಯಾತ್ರಿಗಳ ಕೋಟಾವನ್ನು ಹೆಚ್ಚಳ ಮಾಡುವ ಸಂಬಂಧ ಕೇಂದ್ರ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಜೊತೆ ಚರ್ಚಿಸಲು ಶೀಘ್ರವೇ ಹೊಸದಿಲ್ಲಿಗೆ ತೆರಳುವುದಾಗಿ ಝಮೀರ್‌ಅಹ್ಮದ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಆರ್.ಅಖಂಡ ಶ್ರೀನಿವಾಸ ಮೂರ್ತಿ, ಬಿಬಿಎಂಪಿ ನಾಮ ನಿರ್ದೇಶಿತ ಸದಸ್ಯ ಸೈಯ್ಯದ್ ಮುಜಾಹಿದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News