ಅಲ್ಪಸಂಖ್ಯಾತರ ನಿರ್ದೇಶನಾಲಯದ ಕಾರ್ಯವೈಖರಿಗೆ ಸಚಿವ ಝಮೀರ್‌ ಅಹ್ಮದ್ ಮೆಚ್ಚುಗೆ

Update: 2018-06-20 12:41 GMT

ಬೆಂಗಳೂರು, ಜೂ.19: ರಾಜ್ಯ ಸರಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಕಾರ್ಯವೈಖರಿಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ ಅಹ್ಮದ್‌ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ನಡೆದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕ ಅಕ್ರಮ್‌ ಪಾಷ ಕಳೆದ ಐದು ವರ್ಷಗಳಲ್ಲಿ ನಿರ್ದೇಶನಾಲಯದಲ್ಲಿ ಆಗಿರುವ ಪ್ರಗತಿಯ ವಿವರಣೆಯನ್ನು ಮಂಡಿಸಿದರು.

ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿರುವ 17 ಯೋಜನೆಗಳ ಪೈಕಿ 12 ಯೋಜನೆಗಳು ಆನ್‌ಲೈನ್ ಮೂಲಕ ಅನುಷ್ಠಾನಗೊಳ್ಳುತ್ತಿವೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ, ಹಣಕಾಸಿನ ವರ್ಗಾವಣೆಯಾಗುವುದರಿಂದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮೂಡುತ್ತದೆ. ಇದರಿಂದಾಗಿ, ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಹಾಕಬಹುದು. ಇದೇ ವ್ಯವಸ್ಥೆಯನ್ನು ಕೆಎಂಡಿಸಿಯಲ್ಲೂ ಜಾರಿಗೆ ತರಲು ಝಮೀರ್‌ ಅಹ್ಮದ್ ಆಸಕ್ತಿ ತೋರಿದರು.

ಬಿದಾಯಿ ಯೋಜನೆಯಡಿಯಲ್ಲಿ ಅರ್ಜಿಗಳ ಸಂಖ್ಯೆ ಹೆಚ್ಚಿದ್ದು, ಬಜೆಟ್‌ನಲ್ಲಿ ಒದಗಿಸುತ್ತಿರುವ ಅನುದಾನವನ್ನು ಹೆಚ್ಚಿಸುವ ಅಗತ್ಯವಿರುವ ಮಾಹಿತಿಯನ್ನು ಸಚಿವರು ಪಡೆದುಕೊಂಡಿದ್ದು, ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ಒದಗಿಸುವ ಕುರಿತು ಆಸಕ್ತಿ ತೋರಿದರು. ಇದೇ ವೇಳೆ ವಕ್ಫ್ ಬೋರ್ಡ್, ವಕ್ಫ್ ಕೌನ್ಸಿಲ್, ಉರ್ದು ಅಕಾಡಮಿ, ರಾಜ್ಯ ಹಜ್ ಸಮಿತಿಯ ಪರಿಶೀಲನೆಯನ್ನು ನಡೆಸಿದರು. ಸಭೆಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News