ಈ ಮರವನ್ನು ಮುಟ್ಟಿದರೆ ನೀವು ದೃಷ್ಟಿ ಕಳೆದುಕೊಳ್ಳುತ್ತೀರಿ!

Update: 2018-06-20 16:59 GMT

ವಾಶಿಂಗ್ಟನ್, ಜೂ. 20: ಚರ್ಮವನ್ನು ಸುಡಬಲ್ಲ ಹಾಗೂ ಅಂಧತ್ವವನ್ನು ಉಂಟು ಮಾಡಬಲ್ಲ ದೈತ್ಯ ಹಾಗ್‌ವೀಡ್ ಮರವನ್ನು ಮುಟ್ಟದಂತೆ ಅಮೆರಿಕದ ವರ್ಜೀನಿಯ ರಾಜ್ಯದ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಮರವು ವರ್ಜೀನಿಯದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ.

 ಈ ಮರವು ಬಣ್ಣವಿಲ್ಲದ ಹಾಗೂ ನೀರಿನಂಥ ದ್ರವವನ್ನು ಹೊಂದಿದ್ದು, ಅದು ಚರ್ಮವನ್ನು ಸುಡಬಲ್ಲದು ಹಾಗೂ ತೇವಾಂಶ ಮತ್ತು ಬಿಸಿಲಿನ ಸಂಪರ್ಕಕ್ಕೆ ಬಂದಾಗ ನೋವಿನಿಂದ ಕೂಡಿದ ಬೊಕ್ಕೆಗಳನ್ನು ಸೃಷ್ಟಿಸಬಹುದು. ಈ ಬೊಕ್ಕೆಗಳು ಶಾಶ್ವತ ಕಲೆಯನ್ನು ಉಂಟು ಮಾಡಬಹುದಾಗಿದೆ.

ಮರದ ದ್ರವವು ಚರ್ಮದ ಸಂಪರ್ಕಕ್ಕೆ ಬಂದಾಗ ಚರ್ಮವು ಬಿಸಿಲಿಗೆ ಒಣಗುವ ತೀವ್ರತೆ ಹೆಚ್ಚಾಗುತ್ತದೆ. ಬೊಕ್ಕೆಗಳು ಗುಣವಾದ ಬಳಿಕವೂ, ಚರ್ಮವು ಹಲವು ವರ್ಷಗಳ ಕಾಲ ಬಿಸಿಲಿಗೆ ಹೆಚ್ಚು ಪ್ರತಿಕ್ರಿಯಿಸುತ್ತದೆ ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ.

ವರ್ಜೀನಿಯದಲ್ಲಿ ದೈತ್ಯ ಹಾಗ್‌ವೀಡ್ ಮರ ಪತ್ತೆಯಾದ ಬಳಿಕ, ಐಲ್ ಆಫ್ ವೈಟ್ ಕೌಂಟಿಯು ಬುಧವಾರ ಸುರಕ್ಷತಾ ಎಚ್ಚರಿಕೆಯನ್ನು ನೀಡಿದೆ.

ರಕ್ಷಣಾ ಉಪಕರಣಗಳು ಅಗತ್ಯ

ಕಣ್ಣಿನ ರಕ್ಷಣೆಯ ಉಪಕರಣಗಳು, ಕೈಗೆ ರಬ್ಬರ್ ಕವಚಗಳು ಮುಂತಾದ ಸಂಪೂರ್ಣ ದೇಹವನ್ನು ಮುಚ್ಚುವ ರಕ್ಷಣಾ ಉಪಕರಣಗಳನ್ನು ಬಳಸಿದರೆ ಮಾತ್ರ ಈ ಮರ ಮುಟ್ಟಬಹುದು.

ಯಾಂತ್ರಿಕ ಉಪಕರಣಗಳನ್ನು ಬಳಸಿ ಮರವನ್ನು ಕಡಿಯಬಾರದು. ಯಾಕೆಂದರೆ ಅದರ ದ್ರವ ಚರ್ಮಕ್ಕೆ ತಗುಲಬಹುದು. ಅದರ ಬೇರುಗಳನ್ನು ತೆಗೆಯದಿದ್ದರೆ ಹೊಸ ಮರವೊಂದು ಬೆಳೆಯುತ್ತದೆ.

ಮರವನ್ನು ದಪ್ಪದ ಕಸ ಚೀಲಗಳ ಮೂಲಕ ವಿಲೇವಾರಿ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News