ಮೆಸ್ಸಿಯ ವಿಶ್ವಕಪ್ ಗೆಲ್ಲುವ ಕನಸು ನನಸಾಗಬಹುದೇ ?

Update: 2018-06-22 10:26 GMT

ನಿಝ್ನಿ ನೊವ್ಗೋರ್ಡ್, ಜೂ.20: ಈ ವಾರಾಂತ್ಯದಲ್ಲಿ ಮೂವತ್ತೊಂದನೇ ಹುಟ್ಟುಹಬ್ಬ ಆಚರಿಸುತ್ತಿರುವ ಅರ್ಜೆಂಟೀನಾ ಆಟಗಾರ ಲಿಯೊನೆಲ್ ಮೆಸ್ಸಿಗೆ ಇದು ಕೊನೆಯ ವಿಶ್ವಕಪ್ ಪಂದ್ಯಾವಳಿಯೂ ಆಗಿರಬಹುದು. ಜೊತೆಗೆ ಅರ್ಜೆಂಟೀನದ ದಂತಕತೆ ಡಿಯಾಗೊ ಮರಡೋನಾರಂತೆ ತನ್ನ ದೇಶಕ್ಕೆ ಪ್ರಶಸ್ತಿಯನ್ನು ಗೆದ್ದು ಕೊಡುವ ಅಂತಿಮ ಅವಕಾಶವೂ ಆಗಿದೆ. ಲಾ ಪುಲ್ಗ, ಅಂದರೆ ಕೀಟ ಎಂದೇ ಕರೆಯಲ್ಪಡುವ ಅರ್ಜೆಂಟೀನಾದ ನಾಯಕ ಬಾರ್ಸಿಲೋನಾದ ಬಹುತೇಕ ಎಲ್ಲ ಕ್ಲಬ್‌ಗಳಲ್ಲಿ ಆಡಿ ಪ್ರಶಸ್ತಿಯನ್ನು ಗೆದ್ದಿರುವ ಮೆಸ್ಸಿ ಇದುವರೆಗೂ ವಿಶ್ವಕಪ್ ಮತ್ತು ಕೋಪಾ ಅಮೆರಿಕದಂಥ ಅಂತರ್‌ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಗೆಲುವಿನ ಸ್ವಾದವನ್ನು ಸವಿದಿಲ್ಲ. ಸದ್ಯ ಅರ್ಜೆಂಟೀನಾದ ಫುಟ್ಬಾಲ್ ಪ್ರೇಮಿಗಳ ಪಾಲಿಗೆ ಮೆಸ್ಸಿ ಜಗತ್ತಿನ ಅತ್ಯಂತ ಶ್ರೇಷ್ಠ ಆಟಗಾರನಾಗಿದ್ದರೂ ಅವರು ಇನ್ನೂ ಮರಡೋನಾರ ಸಾಲಿಗೆ ಬಂದಿಲ್ಲ. ಅದಕ್ಕೆ ಕಾರಣ ಎಲ್ ಪೈಬ್ (ಬಾಲಕ) ಎಂದು ಕರೆಯಲ್ಪಡುವ ಡಿಯಾಗೊ ಮರಡೋನಾ 1986ರಲ್ಲಿ ವಿಶ್ವಕಪ್ ಜಯಿಸಿದ್ದರು. ಸದ್ಯ ರಶ್ಯದಲ್ಲಿ ಅರ್ಜೆಂಟೀನಾದ ಆಟದ ಗುಣಮಟ್ಟ ಬಹಳ ಕಳಪೆಯಾಗಿದೆ. ಅರ್ಹತಾ ಸುತ್ತಿನಲ್ಲಿ ಅರ್ಜೆಂಟೀನ ನಿರ್ವಹಣೆ ಸಮಾಧಾನಕರವಾಗಿರಲಿಲ್ಲ. ಹಾಗಾಗಿ ಮೆಸ್ಸಿ ಹಾದಿ ಇನ್ನಷ್ಟು ದುರ್ಗಮವಾಗಿದೆ. ವಿಶ್ವಕಪ್‌ನಲ್ಲಿ ಅರ್ಜೆಂಟೀನಾದ ಮೊದಲ ಪಂದ್ಯದಲ್ಲಿ ಮೆಸ್ಸಿಯ ಪೆನಾಲ್ಟಿ ಹೊಡೆತವನ್ನು ಐಸ್‌ಲ್ಯಾಂಡ್ ಗೋಲ್‌ಕೀಪರ್ ಹಿಡಿಯುವ ಮೂಲಕ ಮೆಸ್ಸಿಯನ್ನು ಮತ್ತಷ್ಟು ಹತಾಶಗೊಳಿಸಿದ್ದರು.

ಆದರೆ ಎಲ್ಲವನ್ನೂ ಪ್ರೇಕ್ಷಕರ ಗ್ಯಾಲರಿಯಲ್ಲಿ ವೀಕ್ಷಿಸುತ್ತಿದ್ದ ಮರಡೋನಾ, ತಾನೂ ಕೂಡಾ ಸತತ ಐದು ಪೆನಾಲ್ಟಿ ಹೊಡೆತಗಳಲ್ಲಿ ವಿಫಲವಾಗಿದ್ದೆ ಹಾಗೂ ಐಸ್‌ಲ್ಯಾಂಡ್ ಜೊತೆ ಸಾಧಿಸಿದ 1-1 ಡ್ರಾ ಇಡೀ ತಂಡದ ವೈಫಲ್ಯ ಎಂದು ಮೆಸ್ಸಿಯನ್ನು ಸಮಾಧಾನಿಸಿದ್ದರು.

ರಶ್ಯ ವಿಶ್ವಕಪ್ ನಂತರ ಮೆಸ್ಸಿ ಫುಟ್ಬಾಲ್‌ನಿಂದ ನಿವೃತ್ತಿ ಪಡೆಯಬಹುದು ಎನ್ನುವುದು ಹಲವರ ಅಭಿಪ್ರಾಯವಾಗಿದೆ. 2016ರಲ್ಲಿ ಕೋಪಾ ಅಮೆರಿಕ ಪಂದ್ಯಾವಳಿಯಲ್ಲಿ ಚಿಲಿ ವಿರುದ್ಧದ ಪೆನಾಲ್ಟಿ ಶೂಟೌಟ್‌ನಲ್ಲಿ ಅವಮಾನಕಾರಿ ಸೋಲಿನಿಂದ ಬೇಸರಗೊಂಡು ನಿವೃತ್ತಿ ಘೋಷಿಸಿದ್ದ ಮೆಸ್ಸಿ ನಂತರ ತಮ್ಮ ನಿರ್ಧಾರವನ್ನು ಹಿಂಪಡೆದಿದ್ದರು. ಆದರೆ ಕ್ಲಬ್ ಮಟ್ಟದಲ್ಲಿ ಮೆಸ್ಸಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಲಾ ಲೀಗ್ ಮತ್ತು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳ ಜೊತೆಗೆ ಐದು ಬಾರಿ ವಿಶ್ವ ವರ್ಷದ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರಷ್ಯಾದಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಮೆಸ್ಸಿಯ ಸಾಮರ್ಥ್ಯ ಮತ್ತು ಆಟದ ಮೇಲಿನ ಹಿಡಿತ ಮತ್ತೊಮ್ಮೆ ಸಾಬೀತಾಗಲಿದೆ. ಆದರೆ ಅವರು ಮರಡೋನಾರಿಗೆ ಸಮಾನರು ಎಂಬುದನ್ನು ವಿಶ್ವಕಪ್ ಜಯಿಸುವ ಮೂಲಕ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಲಂಡನ್ ಮೂಲದ ದಿ ಸ್ಪೋರ್ಟ್ಸ್‌ಮ್ಯಾನ್ ಪತ್ರಿಕೆಯ ಕ್ರೀಡಾ ಲೇಖಕ ಗ್ರೆಗ್ ಲೀ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News