ಭಾರತಕ್ಕೆ ವಿಂಡೀಸ್ ಮೊದಲ ಎದುರಾಳಿ

Update: 2018-06-20 18:56 GMT

ಹೊಸದಿಲ್ಲಿ, ಜೂ.20: 2019ರ ಜುಲೈಯಲ್ಲಿ ನಡೆಯಲಿರುವ ಬಹುಚರ್ಚಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಾಟದಲ್ಲಿ ಪಾದಾರ್ಪಣೆ ಮಾಡುತ್ತಿರುವ ಭಾರತ ತನ್ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸನ್ನು ಎದುರಿಸಲಿದೆ. ನಂತರ 2020ರಲ್ಲಿ ನಡೆಯಲಿರುವ 13 ತಂಡಗಳ ಏಕದಿನ ಪಂದ್ಯಾವಳಿಯಲ್ಲಿ ಶ್ರೀಲಂಕಾ ವಿರುದ್ಧ ಸೆಣಸಲಿದೆ. 2018ರಿಂದ 2023ರವರೆಗಿನ ಪಂದ್ಯಾವಳಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, ಎಲ್ಲ ದ್ವಿಪಕ್ಷೀಯ ಪಂದ್ಯಾವಳಿಗಳು ಮತ್ತು ಮೂರೂ ಮಾದರಿಯ ಕ್ರಿಕೆಟ್ ಪಂದ್ಯಾಟಗಳ ವಿವರವನ್ನು ನೀಡಿದೆ.

ಐಸಿಸಿ ಪ್ರಕಾರ, 2019ರ ಜುಲೈ 15ರಿಂದ ಎಪ್ರಿಲ್ 30, 2021ರ ವರೆಗೆ ನಡೆಯಲಿರುವ ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಒಂಬತ್ತು ಅಗ್ರಪಂಕ್ತಿಯ ಟೆಸ್ಟ್ ತಂಡಗಳು ಭಾಗವಹಿಸಲಿವೆ. ಎರಡು ವರ್ಷಗಳ ಅವಧಿಯಲ್ಲಿ ಎಲ್ಲ ತಂಡಗಳು ತಾವೇ ಆಯ್ಕೆ ಮಾಡಿದ ತಂಡಗಳ ವಿರುದ್ಧ ಆರು ಸರಣಿಗಳನ್ನು ಆಡಲಿವೆ. ಅಂತಿಮ ಎರಡು ವಿಜೇತ ತಂಡಗಳು 2021ರಲ್ಲಿ ನಡೆಯಲಿರುವ ಫೈನಲ್ ಟೆಸ್ಟ್ ಪಂದ್ಯದಲ್ಲಿ ಎದುರಾಗಲಿವೆ. ಇನ್ನು, 2020ರ ಮೇ ಒಂದರಿಂದ 2022ರ ಮಾರ್ಚ್ 31ರ ವರೆಗೆ ನಡೆಯಲಿರುವ ಏಕದಿನ ಪಂದ್ಯಾವಳಿಯಲ್ಲಿ ನೆದರ್ಲೆಂಡ್ ಸೇರಿದಂತೆ ಹದಿಮೂರು ತಂಡಗಳು ಭಾಗವಹಿಸಲಿವೆ. ಪ್ರತಿ ತಂಡ ಎರಡು ವರ್ಷಗಳ ಅವಧಿಯಲ್ಲಿ ಎಂಟು ಸರಣಿಗಳನ್ನು ಆಡಲಿವೆ. ಏಕದಿನ ಪಂದ್ಯಾವಳಿಯು 2023ರಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತಾ ಪಂದ್ಯಾವಳಿಯಾಗಲಿದೆ ಎಂದು ಐಸಿಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News