ಉಗ್ರರಿಗೆ ಹಣ ಪೂರೈಕೆ ಮಾಡಿದ ಪ್ರಮುಖ ಆರೋಪಿಯ ಬಂಧನ

Update: 2018-06-21 06:41 GMT

ಲಕ್ನೋ, ಜೂ.21: ಉಗ್ರಗಾಮಿಗಳಿಗೆ ಹಣ ಪೂರೈಸಿದ ಪ್ರಕರಣದ ಪ್ರಮುಖ ಆರೋಪಿ ರಮೇಶ್ ಶಾ ಎಂಬಾತನನ್ನು ಪುಣೆಯಿಂದ ಉತ್ತರ ಪ್ರದೇಶ ಉಗ್ರ ನಿಗ್ರಹ ಪಡೆ ಮತ್ತು ಮಹಾರಾಷ್ಟ್ರ ಪೊಲೀಸರು ಜಂಟಿ ಕಾರ್ಯಾಚರಣೆಯೊಂದರಲ್ಲಿ ಬಂಧಿಸಿದ್ದಾರೆ. 

ಟ್ರಾನ್ಸಿಟ್ ರಿಮಾಂಡ್ ಪಡೆದು ಆತನನ್ನು ಈಗ ಲಕ್ನೋಗೆ ಕರೆತರಲಾಗುತ್ತಿದೆ. ಆತ ಲಕ್ನೋ ತಲುಪಿದ ಕೂಡಲೇ ಅಲ್ಲಿನ ನ್ಯಾಯಾಲಯವೊಂದರ ಮುಂದೆ ಆತನನ್ನು ಹಾಜರು ಪಡಿಸಿ ನಂತರ ಮುಂದಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗುವುದು ಎಂದು ಎಟಿಎಸ್ ಮಹಾನಿರ್ದೇಶಕ ಅಸೀಂ ಅರುಣ್ ಹೇಳಿದ್ದಾರೆ.

ಪಾಕಿಸ್ತಾನಿ ವ್ಯಕ್ತಿಯೊಬ್ಬನ ಸೂಚನೆ ಮೇರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಜಮೆಗೊಳಿಸಿದ ಆರೋಪದ ಮೇಲೆ ಆರು ಮಂದಿಯನ್ನು ಗೋರಖ್ ಪುರದಲ್ಲಿ ಮಾರ್ಚ್ 24ರಂದು ಬಂಧಿಸಲಾಗಿತ್ತು. ಇದೀಗ ಬಂಧಿಸಲ್ಪಟ್ಟಿರುವ 28 ವರ್ಷದ ರಮೇಶ್ ಶಾ ಈ ಪ್ರಕರಣದ ಸೂತ್ರಧಾರನೆನ್ನಲಾಗಿದೆ.  ಪಾಕಿಸ್ತಾನಿ ವ್ಯಕ್ತಿ ಹಾಗೂ ಉಗ್ರರ ನಡುವೆ 1 ಕೋಟಿ ರೂ.ಗೂ ಅಧಿಕ ಹಣ ಶಾ ಸೂಚನೆಯಂತೆ ವರ್ಗಾವಣೆಗೊಂಡಿದ್ದು ಹೆಚ್ಚಿನ ಹಣ ಮಧ್ಯಪೂರ್ವ ದೇಶಗಳು, ಜಮ್ಮು ಕಾಶ್ಮಿರ ಮತ್ತು ಕೇರಳದಿಂದ ಬಂದಿದ್ದವೆಂದು ತಿಳಿದು ಬಂದಿತ್ತು.

ಬಿಹಾರದ ಗೋಪಾಲಗಂಜ್ ನಿವಾಸಿಯಾದ ರಮೇಶ್ ಶಾ ಗೋರಖಪುರದಲ್ಲಿ ಹಲವು ವರ್ಷಗಳಿಂದ ವಾಣಿಜ್ಯ ಮಳಿಗೆಯೊಂದನ್ನು ನಡೆಸುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News