ಉದ್ದೀಪನ ಪರೀಕ್ಷೆಯಲ್ಲಿ ಅಹ್ಮದ್ ಶೆಹಝಾದ್ ವಿಫಲ; ಅಮಾನತು ಸಾಧ್ಯತೆ

Update: 2018-06-21 18:46 GMT

ಕರಾಚಿ, ಜೂ.21: ಉದ್ದೀಪನ ಪರೀಕ್ಷೆಯಲ್ಲಿ ವಿಫಲವಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆರಂಭಿಕ ದಾಂಡಿಗ ಅಹ್ಮದ್ ಶೆಹಝಾದ್ ಉದ್ದೀಪನ ತಡೆ ಕಾಯ್ದೆಯನ್ನು ಉಲ್ಲಂಘಿಸಿರುವ ಆರೋಪದಡಿ ಮೂರರಿಂದ ಆರು ತಿಂಗಳ ಅಮಾನತು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

13 ಟೆಸ್ಟ್ ಪಂದ್ಯಗಳು, 81 ಏಕದಿನ ಹಾಗೂ 57 ಟ್ವೆಂಟಿ20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ 26ರ ಹರೆಯದ ಶೆಹಝಾದ್ ಪಿಸಿಬಿ ರಚಿಸಿರುವ ತನಿಖಾ ಸಮಿತಿಯ ಎದುರು ಹಾಜರಾಗಲಿದ್ದಾರೆ. ಪ್ರಾಥಮಿಕ ಉದ್ದೀಪನಾ ಪರೀಕ್ಷೆಯಲ್ಲಿ ಶೆಹಝಾದ್ ವಿಫಲವಾಗಿದ್ದಾರೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡುವುದಕ್ಕೂ ಮೊದಲು ಕೆಲವೊಂದು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿದೆ ಎಂದು ಪಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಎಪ್ರಿಲ್-ಮೇ ತಿಂಗಳಲ್ಲಿ ಫೈಸಲಾಬಾದ್‌ನಲ್ಲಿ ನಡೆದ ಪಾಕಿಸ್ತಾನ್ ಕಪ್ ಏಕದಿನ ಪಂದ್ಯಾವಳಿಯ ವೇಳೆ ಶೆಹಝಾದ್ ಉದ್ದೀಪನ ದ್ರವ್ಯ ಸೇವಿಸಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಪಿಸಿಬಿ, ಓರ್ವ ಆಟಗಾರ ಉದ್ದೀಪನ ದ್ರವ್ಯ ಸೇವಿಸಿರುವುದು ಸಾಬೀತಾಗಿದೆ. ಆದರೆ ಐಸಿಸಿ ನಿಯಮದ ಪ್ರಕಾರ ಸರಕಾರದ ಮಾದಕದ್ರವ್ಯ ತಡೆ ಸಂಸ್ಥೆಯ ವರದಿಯಲ್ಲಿ ನಿಷೇಧಿತ ಪದಾರ್ಥವನ್ನು ಸೇವಿಸಿರುವುದು ಖಚಿತವಾಗದ ಹೊರತು ಆಟಗಾರರ ಹೆಸರನ್ನು ಬಹಿರಂಗಪಡಿಸುವುದು ಅಥವಾ ಚಾರ್ಜ್‌ಶೀಟ್ ಹಾಕುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿತ್ತು. 2016ರ ಫೆಬ್ರವರಿಯಲ್ಲಿ ನಿಷೇಧಿತ ಪದಾರ್ಥ ಸೇವಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಲೆಗ್ ಸ್ಪಿನ್ನರ್ ಯಾಸಿರ್ ಶಾಗೆ ಐಸಿಸಿ ಮೂರು ತಿಂಗಳ ಅಮಾನತು ಶಿಕ್ಷೆ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News