ಐಸಿಸಿ ಅಮಾನತು ಶಿಕ್ಷೆ ವಿರುದ್ಧ ಚಾಂಡಿಮಲ್ ಮೇಲ್ಮನವಿ

Update: 2018-06-21 18:47 GMT

ಗ್ರಾಸ್ ಐಸ್ಲೆಟ್, ಜೂ.21: ಚೆಂಡು ವಿರೂಪಗೊಳಿಸಿದ ಕಾರಣಕ್ಕೆ ಸದ್ಯ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಪಂದ್ಯದಿಂದ ತನ್ನನ್ನು ಅಮಾನತುಗೊಳಿಸಿರುವ ಐಸಿಸಿಯ ನಿರ್ಧಾರವನ್ನು ಪ್ರಶ್ನಿಸಿ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಲ್ ಮೇಲ್ಮನವಿ ಸಲ್ಲಿಸಿದ್ದಾರೆ. ಎರಡನೇ ಟೆಸ್ಟ್ ವೇಳೆ ಚಾಂಡಿಮಲ್ ಸಿಹಿ ಪದಾರ್ಥವೊಂದನ್ನು ಬಾಯಿಗೆ ಹಾಕಿದ ನಂತರ ಚೆಂಡಿಗೆ ತನ್ನ ಜೊಲ್ಲನ್ನು ಸವರುತ್ತಿರುವುದು ವೀಡಿಯೊ ಸಾಕ್ಷಿ ಮೂಲಕ ಸಾಬೀತಾದ ಹಿನ್ನೆಲೆಯಲ್ಲಿ ಐಸಿಸಿ ಅವರನ್ನು ಮೂರನೇ ಟೆಸ್ಟ್ ಪಂದ್ಯದಿಂದ ಅಮಾನತು ಗೊಳಿಸಿತ್ತು.

 ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಮುಂದೆ ವಿಚಾರಣೆಗೆ ಹಾಜರಾಗುವುದಕ್ಕೂ ಮೊದಲು ಚಾಂಡಿಮಲ್ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿದ್ದರು. ಆದರೆ ಈ ವಾದವನ್ನು ತಳ್ಳಿ ಹಾಕಿದ ಶ್ರೀನಾಥ್, ಚಾಂಡಿಮಲ್‌ಗೆ ಎರಡು ಅಮಾನತು ಅಂಕಗಳು ಮತ್ತು ಪಂದ್ಯ ಶುಲ್ಕದ ಶೇ. ನೂರು ದಂಡವನ್ನು ವಿಧಿಸಿ ಆದೇಶ ನೀಡಿದರು.

 ಮ್ಯಾಚ್ ರೆಫ್ರಿಯ ನಿರ್ಧಾರದ ವಿರುದ್ಧ ಚಾಂಡಿಮಲ್ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಐಸಿಸಿ ಟ್ವಿಟರ್‌ನಲ್ಲಿ ತಿಳಿಸಿದೆ. ಆದರೆ ಶ್ರೀನಾಥ್ ನಿರ್ಧಾರವನ್ನು ಬೆಂಬಲಿಸಿರುವ ಐಸಿಸಿ ಮುಖ್ಯ ಕಾರ್ಯವಾಹಕ ಡೇವಿಡ್ ರಿಚರ್ಡ್ಸನ್, ಐಸಿಸಿಯು ತಮ್ಮ ಅಧಿಕಾರಿಗಳ ನಿರ್ಧಾರಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಮತ್ತು ಮುಂದೆಯೂ ಹಾಗೆಯೇ ಮಾಡುತ್ತದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News